

ಶಶಿ ಕುತ್ಯಾಳ, ಈಶ್ವರಮಂಗಲ ಕರ್ನಾಟಕ ಕೇರಳ ಅಂತರ್‌ರಾಜ್ಯ ಸಂಪರ್ಕಿಸುವ, ತುಳುನಾಡಿನ ಐತಿಹಾಸಿಕ ಅವಳಿ ವೀರರಾದ ಕೋಟಿ-ಚೆನ್ನಯರ ಹುಟ್ಟೂರಾದ ಪಡುಮಲೆಯಲ್ಲಿರುವ ಐತಿಹಾಸಿಕ ಪ್ರೇಕ್ಷಣೀಯ ತಾಣಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಆಗಿರುವ ಮುಡಿಪಿನಡ್ಕ- ಸುಳ್ಯಪದವು ರಸ್ತೆಯ ಕೆಲವು ಕಡೆಗಳಲ್ಲಿ ಬೃಹತ್ ಗಾತ್ರದ ಹೊಂಡ-ಗುಂಡಿ ನಿರ್ಮಾಣವಾಗಿವೆ. ಹದಗೆಟ್ಟಿರುವ ರಸ್ತೆ ಭಾಗದಲ್ಲಿ ವಾಹನ ಸವಾರರು ‘ಸರ್ಕಸ್ ಸವಾರಿ’ ಮಾಡಿ ಪ್ರಯಾಣಿಸಬೇಕಾದ ಕಷ್ಟಕರ ಸನ್ನಿವೇಶ ಎದುರಾಗಿದೆ. ಈ ಹಿಂದೆ ಜಿಪಂ ಅಧೀನದಲ್ಲಿದ್ದ ಮುಡ್ಪಿನಡ್ಕ-ಸುಳ್ಯದವು ರಸ್ತೆಯ ಮೈಂದನಡ್ಕದಿಂದ ಕನ್ನಡ್ಕ ತನಕದ 2.5 ಕಿ.ಮೀ. ರಸ್ತೆ ಭಾಗವನ್ನು ಕಳೆದ 5 ವರ್ಷಗಳ ಹಿಂದೆ ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿತ್ತು. ಕುದ್ಕಾಡಿಯಿಂದ ಪದಡ್ಕ ತನಕದ ರಸ್ತೆ ಭಾಗವನ್ನು ಕಾಂಕ್ರೀಟ್ ಕಾಮಗಾರಿ ನಡೆಸಿ ಉಳಿದ ಭಾಗಕ್ಕೆ ಡಾಂಬರ್ ಹಾಕಲಾಗಿತ್ತು. ಕಳೆದ ಎರಡು ವರ್ಷಗಳ ಹಿಂದೆ ಈಶ್ವರಮಂಗಲ- ಸುಳ್ಯಪದವು ಲೋಕೋಪಯೋಗಿ ಇಲಾಖೆ ರಸ್ತೆಯನ್ನು ‘ಪ್ರಧಾನ ಮಂತ್ರಿ ಗ್ರಾಮ ಸಡಕ್’ ಯೋಜನೆಯಡಿ ಡಾಂಬರು ಹಾಕುವ ವೇಳೆ ಕನ್ನಡ್ಕ ಭಾಗದಲ್ಲಿ ಈ ಹಿಂದೆ ‘ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ’ ಡಾಂಬರು ಹಾಕಿ ಅಭಿವೃದ್ಧಿಪಡಿಸಲಾಗಿದ್ದ 1 ಕಿ.ಮೀ. ವ್ಯಾಪ್ತಿಯ ರಸ್ತೆ ಭಾಗ ಕೈಬಿಡಲಾಗಿತ್ತು. ಇದೀಗ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ 5 ವರ್ಷದ ಹಿಂದೆ ಅಭಿವೃದ್ಧಿಪಡಿಸಲಾಗಿದ್ದ ರಸ್ತೆ ಭಾಗದಲ್ಲಿ ಹೊಂಡ-ಗುಂಡಿಗಳಾಗಿವೆ. ಕನ್ನಡ್ಕ ವ್ಯಾಪ್ತಿಯ ಎರಡು ಕಡೆಗಳಲ್ಲಿ ಡಾಂಬರು ಎದ್ದು ಹೋಗಿ, ಹೊಂಡ-ಗುಂಡಿಗಳು ನಿರ್ಮಾಣವಾಗಿ ರಸ್ತೆ ಚಿತ್ರಣವೇ ಬದಲಾಗಿದೆ. ಮಳೆಯ ವೇಳೆ ರಸ್ತೆ ಹೊಂಡಗಳಲ್ಲಿ ಮಳೆನೀರು ತುಂಬಿಕೊಳ್ಳುತ್ತಿದ್ದು, ರಸ್ತೆಯೇ ಗೋಚರಿಸದ ಸನ್ನಿವೇಶ ಇದೆ. ಈ ಹದಗೆಟ್ಟಿರುವ ರಸ್ತೆ ಭಾಗದಲ್ಲಿ ವಾಹನ ಚಲಾಯಿಸುವುದೇ ವಾಹನ ಚಾಲಕರ ಪಾಲಿಗೆ ದುಸ್ಸಾಹಸ. ದ್ವಿಚಕ್ರ ವಾಹನ ಸವಾರರ ಪಾಲಿಗಂತೂ ಅಪಾಯ ಕಟ್ಟಿಟ್ಟ ಬುತ್ತಿ. ಈ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆದು 5 ವರ್ಷ ಕಳೆದಿದೆ. ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರರು 5 ವರ್ಷದ ತನಕ ರಸ್ತೆ ನಿರ್ವಹಣೆ ಮಾಡಬೇಕು ಎಂಬ ಷರತ್ತು ಹೊಂದಿದ್ದರೂ ಕಳೆದ 2 ವರ್ಷಗಳಿಂದ ರಸ್ತೆ ದುರಸ್ತಿ ನಡೆದಿಲ್ಲ. ಇದರಿಂದಾಗಿ ರಸ್ತೆ ಸಂಪೂರ್ಣ ಹದಗೆಟ್ಟಿದೆ ಎಂಬುವುದು ಗ್ರಾಮಸ್ಥರ ಆರೋಪ. ತಕ್ಷಣ ರಸ್ತೆ ದುರಸ್ತಿ ಕಾರ್ಯ ನಡೆಸಿ ವಾಹನ ಸವಾರರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಗಮನಹರಿಸಬೇಕು ಎಂಬುವುದು ಗ್ರಾಮಸ್ಥರ ಆಗ್ರಹ. ಪಿಡಬ್ಲ್ಯು ಸುಪರ್ದಿಗೆ ಪ್ರಸ್ತುತ ಮುಡ್ಪಿನಡ್ಕ-ಪದಡ್ಕ ರಸ್ತೆ ಲೋಕೋಪಯೋಗಿ ಇಲಾಖೆಯ ರಸ್ತೆಯಾಗಿ ಮೇಲ್ದರ್ಜೆಗೇರಿದೆ. ಈಶ್ವರಮಂಗಲ-ಸುಳ್ಯಪದವು ರಸ್ತೆಯೂ ಲೋಕೋಪಯೋಗಿ ಇಲಾಖೆಗೆ ಸೇರಿದ್ದಾಗಿದೆ. ಆದರೆ ಈ ಹಿಂದೆ ಮುಡ್ಪಿನಡ್ಕ-ಸುಳ್ಯಪದವು ರಸ್ತೆ ಜಿಪಂ ರಸ್ತೆಯಾಗಿದ್ದ ವೇಳೆ ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ಅಭಿವೃದ್ಧಿಪಡಿಸಿರುವುದರಿಂದ ರಸ್ತೆ ನಿರ್ವಹಣೆಯ ಜವಾಬ್ದಾರಿ ಈಗಲೂ ಜಿಪಂಗೆ ಸಂಬಂಧಿಸಿದ ಯೋಜನಾ ಉಪವಿಭಾಗದ ಮೇಲಿದೆ. ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯ ಷರತ್ತಿನಂತೆ ಕಾಮಗಾರಿ ಪೂರ್ಣಗೊಂಡ ಬಳಿಕದ 5 ವರ್ಷಗಳ ಕಾಲ ರಸ್ತೆ ನಿರ್ವಹಣೆ ಹಾಗೂ 6ನೇ ವರ್ಷದೊಳಗೆ ಸಂಪೂರ್ಣವಾಗಿ ಮರು ಡಾಂಬರು ಕಾಮಗಾರಿ ಗುತ್ತಿಗೆದಾರರು ನಿರ್ವಹಿಸಬೇಕಿದೆ. ಆದರೆ ಇದರಲ್ಲಿ ಲೋಪವಾಗಿದೆ ಎನ್ನುವುದು ಅಪಸ್ವರ. ವಿಸ್ತರಣೆಗೆ ಆಗ್ರಹ ಪಡುಮಲೆ ಐತಿಹಾಸಿಕ ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಇಲ್ಲಿನ ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ವಿವಿಧ ಭಾಗದ ಪ್ರವಾಸಿಗರು ಬರುತ್ತಿದ್ದಾರೆ. ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕೌಡಿಚ್ಚಾರಿನಿಂದ ಮತ್ತು ಪುತ್ತೂರು- ಪಾಣಾಜೆ ರಸ್ತೆಯ ರೆಂಜದಿಂದ ಮುಡ್ಪಿನಡ್ಕ - ಸುಳ್ಯಪದವು ಮೂಲಕ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಅಂತಾ ರಾಜ್ಯ ಸಂಪರ್ಕ ರಸ್ತೆಯೂ ಇದಾಗಿದೆ. ನಿಡ್ಪಳ್ಳಿಯಿಂದ ಈ ರಸ್ತೆಯು ಮೈಂದನಡ್ಕಕ್ಕೆ ನೇರ ಸಂಪರ್ಕ ರಸ್ತೆ ಇದೆ. ಹಲವು ಭಾಗಗಳ ಸಂಪರ್ಕ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಮುಡ್ಪಿನಡ್ಕ- ಪದಡ್ಕ ರಸ್ತೆಯ ಮುಡ್ಪಿನಡ್ಕದಿಂದ ಮೈಂದನಡ್ಕ ತನಕ ಅಗಲ ಕಿರಿದಾಗಿರುವ ಈ ರಸ್ತೆಯನ್ನು ವಿಸ್ತರಿಸಬೇಕು ಎನ್ನುವುದು ಬಡಗನ್ನೂರು ಗ್ರಾಮಸ್ಥರ ಆಗ್ರಹ.
ಕಾಮಗಾರಿ ನಡೆದು 5 ವರ್ಷ ಕಳೆದಿದೆ. ಪ್ರಸ್ತುತ ಮಳೆಗಾಲವಾಗಿರುವ ಕಾರಣ ಮರುಡಾಂಬರು ಕಾಮಗಾರಿ ನಡೆಸುವಂತಿಲ್ಲ. ಕಾಮಗಾರಿ ನಡೆದ ಬಳಿಕದ 6ನೇ ವರ್ಷದೊಳಗೆ ರಸ್ತೆಯನ್ನು ಮರು ಡಾಂಬರು ಗೊಳಿಸಬೇಕೆಂಬ ಷರತ್ತು ಇದ್ದು, ಈ ಷರತ್ತಿನಂತೆ ಮುಂದಿನ ಜನವರಿಯೊಳಗೆ(6 ವರ್ಷದೊಳಗೆ) ರಸ್ತೆಗೆ ಮರುಡಾಂಬರು ಹಾಕಲಾಗುವುದು. ಜನಾರ್ದನ್, ಯೋಜನಾ ಉಪವಿಭಾಗದ ಇಂಜಿನಿಯರ್