ಬಿಜೆಪಿಯವರ ಉದ್ದೇಶ ಅರ್ಥೈಸಿಕೊಳ್ಳದಷ್ಟು ಮೂರ್ಖರಲ್ಲ ನಾವು: ಸಿಎಂ ಸಿದ್ದರಾಮಯ್ಯ

ವಿಜಯವಾಣಿ (77)
Published on

ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣ ಮತ್ತು ಮುಡಾ ಗೋಲ್ಮಾಲ್ ವಿಚಾರಗಳು ಸದ್ಯ ರಾಜ್ಯ ರಾಜಕೀಯದಲ್ಲಿ ಭಾರೀ ಕೋಲಾಹಲ ಎಬ್ಬಿಸಿದ್ದು, ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ನೇರವಾಗಿ ದೂಷಿಸುತ್ತಿರುವ ಬಿಜೆಪಿ ನಾಯಕರು, ಸಾಲು ಸಾಲು ಹಗರಣಗಳಿಗೆ ಸಾಕ್ಷಿಯಾಗಿರುವ ಇಂತಹ ಸರ್ಕಾರ ರಾಜ್ಯದ ಜನತೆಗೆ ಬೇಡವಾಗಿದೆ. ಈ ಕೂಡಲೇ ಸಿದ್ದರಾಮಯ್ಯರವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಮಧ್ಯೆ ಬಿಜೆಪಿಗರ ವಿರುದ್ಧ ಧ್ವನಿ ಎತ್ತಿರುವ ಸಿಎಂ, ಇವರ ಉದ್ದೇಶಗಳೇನು ಎಂಬುದನ್ನು ಅರ್ಥೈಸಿಕೊಳ್ಳದಷ್ಟು ಮೂರ್ಖರು ನಾವಲ್ಲ ಎಂದಿದ್ದಾರೆ.

"ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷ ಸಿಬಿಐ ಹಾಗೂ ಇಡಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು, ರಾಜಕೀಯ ವಿರೋಧಿಗಳನ್ನು ಮುಗಿಸಲು ಹೊರಟಿದೆ. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಹತ್ತಾರು ಹಗರಣಗಳು ನಡೆದಾಗ ಒಂದನ್ನಾದರೂ ಇಡಿ ಅವರು ಸ್ವಯಂ ಪ್ರೇರಣೆಯಿಂದ ದೂರು ದಾಖಲು ಮಾಡಿಕೊಂಡು ತನಿಖೆ ನಡೆಸಿದ್ದರೇ? ಮತ್ತೆ ಈಗೇಕೆ ಇಡಿ ಅವರು ತನಿಖೆಗೆ ಬಂದಿದ್ದಾರೆ, ಇದರ ಹಿಂದೆ ಯಾರಿದ್ದಾರೆ? ಅವರ ಉದ್ದೇಶವೇನು ಎಂಬುದನ್ನು ಅರ್ಥೈಸಿಕೊಳ್ಳದಷ್ಟು ನಾವು ಮೂರ್ಖರಲ್ಲ" ಎಂದರು.

"ಬಿಜೆಪಿಯವರು ದೇಶದ ಪ್ರಜಾಪ್ರಭುತ್ವ, ಸಂವಿಧಾನದ ಆಶಯಗಳನ್ನು ಕೊಲ್ಲುತ್ತಿದ್ದಾರೆ. ಜನರಿಂದ ಆಯ್ಕೆಯಾದ ಸರ್ಕಾರಗಳನ್ನು ಅಸ್ಥಿರಗೊಳಿಸುವ ಬಿಜೆಪಿಯ ಹುನ್ನಾರಕ್ಕೆ ಜನರೇ ತಕ್ಕ ಉತ್ತರ ನೀಡುತ್ತಾರೆ. ಇವರು ಎಂದಿಗೂ ಸಂವಿಧಾನದ ಪರವಾಗಿ ನಿಂತವರಲ್ಲ. ಅವರ ಪಕ್ಷ ಹುಟ್ಟಿನಿಂದಲೇ ಈ ದೇಶದ ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಒಕ್ಕೂಟ ವ್ಯವಸ್ಥೆಯ ವಿರೋಧಿಯಾಗಿದೆ" ಎಂದು ಕಿಡಿಕಾರಿದರು.

"ರಾಜ್ಯದಲ್ಲಿ ಎಸ್.ಸಿ.ಎಸ್.ಪಿ / ಟಿ.ಎಸ್.ಪಿ ಕಾಯ್ದೆಯನ್ನು ರೂಪಿಸಿ ಜಾರಿಗೆ ತಂದವರು ನಾವು, ಬಡ್ತಿಯಲ್ಲಿ ಮೀಸಲಾತಿ ಜಾರಿ ಮಾಡಿದವರು ನಾವು, ಗುತ್ತಿಗೆ ಕಾಮಗಾರಿಗಳಲ್ಲಿ ಮೀಸಲು ಅಳವಡಿಕೆ ಮಾಡಿದವರು ನಾವು. ಸಂವಿಧಾನ ಮತ್ತು ಬಾಬಾ ಸಾಹೇಬರ ಆಶಯಗಳನ್ನೇ ಮಾದರಿಯಾಗಿಟ್ಟುಕೊಂಡು ನಡೆಯುತ್ತಿರುವ ನನಗೆ ಸಂವಿಧಾನ ವಿರೋಧಿಯಾದ ಬಿಜೆಪಿ ಸಾಮಾಜಿಕ ನ್ಯಾಯದ ಪಾಠ ಮಾಡಲು ಬರುತ್ತಿದೆ" ಎಂದು ಹೇಳುವ ಮೂಲಕ ತಮ್ಮ ಮೇಲಿನ ಸರಣಿ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net