

ಬೆಂಗಳೂರು:
ಮುಡಾ ಹಗರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ವಿಧಾನಸೌಧದ ಗಾಂದಿ ಪ್ರತಿಮೆ ಎದುರು ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಪ್ರತಿಭಟನೆ ನಡೆಸಿತು.
ಭ್ರಷ್ಟ ಸರ್ಕಾರಕ್ಕೆ ದಿಕ್ಕಾರ, ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದಿಕ್ಕಾರ ಎಂದು ೋಷಣೆ ಕೂಗಿದ ಪ್ರತಿಭಟನಾಕಾರರು, ತನ್ನ ಪತ್ನಿಗೆ 14 ಸೈಟು ಪಡೆದು ವಂಚನೆ ಮಾಡಿರುವ ಸಿಎಂ, ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ರಾಜೀನಾಮೆ ನೀಡಿ ತೊಲಗಿ
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಮುಡಾ ಹಗರಣ ಮತ್ತು ವಾಲ್ಮಿಕಿ ನಿಗಮ ಹಗರಣದಲ್ಲಿ ಸಿದ್ದರಾಮಯ್ಯನವರ ಸಮಾಜವಾದದ ಮುಖವಾಡ ಕಳಚಿ ಬಿದ್ದಿದೆ. ಆದ್ದರಿಂದ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮನೆಗೆ ತೊಲಗಲಿ ಎಂದರು.
ಭ್ರಷ್ಟಾಚಾರದ ವಿರುದ್ಧ ಬಿಜೆಪಿ- ಜೆಡಿಎಸ್ ನಿರಂತರ ಹೋರಾಟ ನಡೆಸುತ್ತಿವೆ. ಈ ಹೋರಾಟ ಇದೀಗ ತಾರ್ಕಿಕ ಅಂತ್ಯಕ್ಕೆ ಬಂದಿದೆ. ಮೂಡಾದಲ್ಲಿ 4 ರಿಂದ 5 ಸಾವಿರ ಕೋಟಿಯ ನಿವೇಶನಗಳನ್ನು ನುಂಗಿ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಗರಣ ಕೇಳಿ ಬಂದ ಕೂಡಲೇ, ಭಂಡತನ ಬಿಟ್ಟು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿತ್ತು. ಆದರೆ, ಸಿದ್ದರಾಮಯ್ಯನವರು ಗೂಂಡಾಗಿರಿಗೆ ಇಳಿದಿದ್ದಾರೆ. ರಾಜ್ಯಪಾಲರ ಮೇಲೆ ಆರೋಪ ಮಾಡುವುದನ್ನು ಬಿಟ್ಟು, ರಾಜೀನಾಮೆ ಕೊಟ್ಟು ನಿರ್ಗಮಿಸಲಿ ಎಂದರು.
ಭ್ರಷ್ಟರಿಂದ, ಭ್ರಷ್ಟರಿಗಾಗಿ, ಭ್ರಷ್ಟರಿಗೋಸ್ಕರ ಕಾಂಗ್ರೆಸ್ ಸರ್ಕಾರ ಇದೆ ಎನ್ನುವುದು ಸಾಭೀತಾಗಿದೆ.
ಈಗಲಾದರೂ ಸಚಿವರು, ಶಾಸಕರು ಬೆನ್ನಿಗೆ ನಿಲ್ಲುವ ಭ್ರಮೆಯಿಂದ ಹೊರಕ್ಕೆ ಬನ್ನಿ. ಹೈಕಮಾಂಡ್ ಕೂಡ ವಾಸ್ತ ಅರ್ಥ ಮಾಡಿಕೊಂಡು ಕ್ರಮ ಜರುಗಿಸಲಿ ಎಂದರು.
ರಾಜ್ಯಪಾಲರ ಆಡಳಿತ ಜಾರಿಯಾಗಲಿ:
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಮುಡಾ ಹಗರಣದಲ್ಲಿ ಸಾವಿರಾರು ಕೋಟಿ ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಲೂಟಿ ಆಗಿದೆ. ಸಿದ್ದರಾಮಯ್ಯ ಸಿಎಂ ಕುರ್ಚಿ ಬಿಡಬೇಕೆಂದು ಜನರು ಬಯಸುತ್ತಿದ್ದಾರೆ. ಲೂಟಿಕೋರ ಸಿದ್ದರಾಮಯ್ಯನವರು ಕೂಡಲೇ ರಾಜೀನಾಮೆ ಕೊಟ್ಟು ತೊಲಗಿ ಎಂದರು.
ನೀವು ಅಪರಾಧಿ ಅಲ್ಲ ಎನ್ನಲು ವಿಧಾನಸಭೆಯ ಅಧಿವೇಶನದಲ್ಲಿ ಅವಕಾಶವಿತ್ತು. ನಿಮ್ಮ ಸ್ವಚ್ಛತೆಯನ್ನು ವಿಧಾನಸಭೆಯಲ್ಲೇ ಸ್ಪಷ್ಟಪಡಿಸದೆ ಓಡಿ ಹೋಗಿದ್ದೀರಿ ಎಂದು ಟೀಕಿಸಿದರು.
ಹೋರಾಟ ಮಾಡಲು ಮುಂದಾದ ಕಾಂಗ್ರೆಸ್ ಕಾನೂನು-ಸುವ್ಯವಸ್ಥೆ ಹದಗೆಡಲು ಕಾರಣವಾಗುತ್ತಿದೆ. ಕಾಂಗ್ರೆಸ್ಸಿಗರು ಕಾನೂನನ್ನು ಕೈಗೆ ತೆಗೆದುಕೊಂಡಿದ್ದಾರೆ. ಆದ್ದರಿಂದ ಕೂಡಲೇ ರಾಜ್ಯಪಾಲರ ಆಡಳಿತ ಜಾರಿಗೊಳಿಸಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಿದರು.
ಜಾರ್ಜ್ ಫರ್ನಾಂಡಿಸ್, ಅಡ್ವಾಣಿ, ರಾಮಕೃಷ್ಣ ಹೆಗಡೆ ಅವರು ಆಪಾದನೆ ಬಂದಾಗ ರಾಜೀನಾಮೆ ಕೊಟ್ಟು ಮಾದರಿ ಹೆಜ್ಜೆ ಇಟ್ಟಿದ್ದರು. ಆದರೆ ನೀವು ಲಜ್ಜೆಗೆಟ್ಟ ಹೆಜ್ಜೆ ಇಟ್ಟಿದ್ದೀರಿ ಎಂದು ಟೀಕಿಸಿದರು.
ಕೇವಲ 5.95 ಲಕ್ಷದ ಜಮೀನಿಗೆ 62 ಕೋಟಿ ಕೇಳುವುದು ಸರಿಯೇ? ಎಂದು ಪ್ರಶ್ನಿಸಿದ ಅವರು, ರಾಜೀನಾಮೆ ಕೊಡುವವರೆಗೆ ಜಂಟಿ ಹೋರಾಟ ನಿಲ್ಲದು ಎಂದು ಎಚ್ಚರಿಸಿದರು.
ದಲಿತರನ್ನು ನಾಶ ಮಾಡಿದ್ದೀರಿ:
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ನಿಮ್ಮನ್ನು ನಂಬಿದ ದಲಿತರ ಚರ್ಮ ಸುಲಿದು ಚಪ್ಪಲಿ ಮಾಡಿರುವುದು ಅಷ್ಟೆ ಅಲ್ಲ, ದಲಿತರನ್ನು ಸಂಪೂರ್ಣ ನಾಶ ಮಾಡಿದ್ದೀರಿ ಎಂದು ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಎರಡೂ ಪಕ್ಷಗಳ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು ಮತ್ತು ವಿಧಾನಪರಿಷತ್ ಮಾಜಿ ಸದಸ್ಯರು ಉಪಸ್ಥಿತರಿದ್ದರು.
*ರಾಜ್ಯಪಾಲರು ಕಾನೂನಾತ್ಮಕವಾಗಿ ನಡೆದುಕೊಂಡಿದ್ದಾರೆ. ಸಿದ್ದರಾಮಯ್ಯ ಅವರು ನಿಜವಾಗಿ ಸತ್ಯ ಹರಿಶ್ಚಂದ್ರರಾಗಬೇಕಾದರೆ, ಮೊದಲು ಗೌರವದಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು.
-ಡಿ.ವಿ.ಸದಾನಂದಗೌಡ, ಮಾಜಿ ಮುಖ್ಯಮಂತ್ರಿ
*ಮೂಡ ಹಗರಣ ಬೆಳಕಿಗೆ ಬಂದ ತಕ್ಷಣವೇ ನಗರಾಭಿವೃದ್ಧಿ ಸಚಿವರು ಮೈಸೂರಿಗೆ ಧಾವಿಸಿ ಕಡತಗಳನ್ನು ಹೊತ್ತೊಯ್ದಿದ್ದಾರೆ. ಸಾಕ್ಷ್ಯ ನಾಶ ಮಾಡಲು ಯತ್ನಿಸಿದ್ದಾರೆ. ಶಾಸಕರು, ಸಚಿವರು, ಕಾರ್ಯಕರ್ತರು ನಿಮ್ಮ ಜೊತೆ ಇದ್ದರೆ ಅನ್ಯಾಯ ಮಾಡಿದ್ದು ನ್ಯಾಯ ಆಗುತ್ತದೆಯೇ? ದಾಖಲೆ ಸಹಿತ ನೀವು ಸಿಕ್ಕಿ ಹಾಕಿಕೊಂಡಿದ್ದೀರಿ. ಕೂಡಲೇ ರಾಜೀನಾಮೆ ನೀಡಿ.
*ಗ್ಯಾರಂಟಿ ಎನ್ನುವುದು ನಿಮಗೆ ಭ್ರಷ್ಟಾಚಾರ ನಡೆಸಲು ಕೊಟ್ಟ ಲೈಸನ್ಸ್ ಅಲ್ಲ. ಲೂಟಿ ಹೊಡೆದರೆ ಕೇಳುವಂತಿಲ್ಲ ಎಂಬುದು ಸರಿಯಲ್ಲ. ರೇಟ್ ಕಾರ್ಡ್ ಫಿಕ್ಸ್ ಮಾಡಲು ನಿಮಗೆ ಅನುಮತಿ ನೀಡಿಲ್ಲ. ನಿಮ್ಮ ಬ್ಲಾಕ್ ಮೇಲ್ ರಾಜಕಾರಣ ಬಿಡಿ. ರಾಜೀನಾಮೆ ಕೊಡಿ.
-ಸಿ.ಟಿ.ರವಿ, ವಿಧಾನಪರಿಷತ್ ಸದಸ್ಯ
*ಸಿದ್ದರಾಮಯ್ಯ ಸರ್ಕಾರದಲ್ಲಿ ಹಲವಾರು ಹಗರಣಗಳು ನಡೆದಿವೆ. ಇದು ಹಗರಣಗಳ ಸರ್ಕಾರ. ಸ್ವಚ್ಛ ಎನ್ನುವು ಸಿದ್ದರಾಮಯ್ಯನವರ ಭ್ರಷ್ಟಾಚಾರ ನೋಡಿ, ನಗಬೇಕೋ, ಅಳಬೇಕೋ ತಿಳಿಯದು.
*ಮುಖ್ಯಮಂತ್ರಿ ರಾಜೀನಾಮೆ ಕೊಡುವವರೆಗೆ ಎನ್‌ಡಿಎ ಅಂಗಪಕ್ಷಗಳಾದ ನಾವು ಹೋರಾಟ ಮಾಡಲಿದ್ದೇವೆ. ಅಹಿಂದದಲ್ಲಿ ದ ಎಂಬ ಅಕ್ಷರವನ್ನು ಸಿದ್ದರಾಮಯ್ಯನವರು ನುಂಗಿಹಾಕಿದ್ದಾರೆ.
*ಕಾಂಗ್ರೆಸ್ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರ ಮಾಡುತ್ತಿದೆ. ಆತ್ಮಸಾಕ್ಷಿ ಇದ್ದಿದ್ದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು. ಅವರು ಜೈಲಿಗೆ ಹೋದರೆ, ಬಂಡೆ ಜೊತೆಗೆ ಇರುವುದಿಲ್ಲ.