

ಬೆಂಗಳೂರು:
ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆಯನ್ನು ಒಕ್ಕೊರಲಿನಿಂದ ಖಂಡಿಸಿರುವ ಇಡೀ ಸಚಿವ ಸಂಪುಟ, ಮುಖ್ಯಮಂತ್ರಿ ಸಿದ್ದರಾಂಯ್ಯ ಅವರ ಬೆನ್ನಿಗೆ ಅಚಲವಾಗಿ ನಿಂತಿದೆ.
ರಾಜ್ಯಪಾಲರ ತೀರ್ಮಾನ ಅಸಂವಿಧಾನಿಕ, ಕಾನೂನು ಮತ್ತು ಸಂವಿಧಾನ ಬಾಹಿರ ಎಂದು ಖಂಡಿಸಿ ಸಚಿವ ಸಂಪುಟ ನಿರ್ಣಯ ತೆಗೆದುಕೊಂಡಿದೆ.
ಕೇಂದ್ರ ಸರ್ಕಾರ ರಾಜ್ಯಪಾಲರ ಮೂಲಕ ಚುನಾಯಿತ ಸರ್ಕಾರವನ್ನು ಅಸ್ತಿರಗೊಳಿಸುತ್ತಿದೆ. ಇದು ಪ್ರಜಾಪ್ರಭುತ್ವದ ಮೂಲಭೂತ ತತ್ವಕ್ಕೆ ಧಕ್ಕೆ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ, ಪ್ರಜಾತಂತ್ರಕ್ಕೆ ಧಕ್ಕೆ ಎಂದು ಸಚಿವ ಸಂಪುಟ ನಿರ್ಣಯಿಸಿದೆ.
ಚುನಾಯಿತ ಸರ್ಕಾರವನ್ನು ಕಿತ್ತಾಕುವ ಕೇಂದ್ರ ಸರ್ಕಾರದ ದುರುದ್ದೇಶದ ಪ್ರಯತ್ನಕ್ಕೆ ತಡೆಯೊಡ್ಡಬೇಕು ಮತ್ತು ರಾಜ್ಯಪಾಲರ ಕಾನೂನುಬಾಹಿರ ತೀರ್ಮಾನದ ವಿರುದ್ಧ ಕಾನೂನು ಹೋರಾಟ ನಡೆಸಬೇಕು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ರಾಷ್ಟ್ರಪತಿಗಳ ಪ್ರತಿನಿಧಿಯಾಗಿರುವ ರಾಜ್ಯಪಾಲರು ಸಂವಿಧಾನ ಉಳಿಸುವ ಕೆಲಸ ಮಾಡಬೇಕೇ ಹೊರತು, ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಕೆಲಸ ಮಾಡಬಾರದು ಸಂಪುಟ ಕಿವಿ ಮಾತು ಹೇಳಿದೆ. ರಾಜ್ಯಪಾಲರ ಈ ಧೋರಣೆಯನ್ನು ಸಚಿವ ಸಂಪುಟ ತೀವ್ರವಾಗಿ ಖಂಡಿಸಿದೆ.