ನಾಲ್ಕನೇ ಬಾರಿ ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಣೆ

26-05-25--krs1 (2)
ಕೆ.ಆರ್.ಸಾಗರ ಅಣೆಕಟ್ಟೆಯ ನೀರಿನ ಸಂಗ್ರಹದ ಚಿತ್ರ.
Published on

ಕೆ.ಆರ್.ಸಾಗರ: ಕೃಷ್ಣರಾಜಸಾಗರ ಅಣೆಕಟ್ಟೆ ಭರ್ತಿಗೆ 4 ಅಡಿ ನೀರು ಮಾತ್ರ ಬೇಕಾಗಿದೆ. ಈಗಿರುವ ಒಳಹರಿವಿನ ಪ್ರಮಾಣ ಇದೇ ರೀತಿ ಮುಂದುವರಿದಲ್ಲಿ ಎರಡು ದಿನಗಳಲ್ಲಿ ಅಣೆಕಟ್ಟೆ ಭರ್ತಿಯಾಗಬಹುದು. ಜೂನ್ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಿನ ಅರ್ಪಿಸಿದರೆ ಹೊಸ ದಾಖಲೆಯಾಗಲಿದೆ.

ಆದರೆ ಮುಖ್ಯಮಂತ್ರಿ ಬಾಗಿನ ಅರ್ಪಿಸಲು ದಿನಾಂಕ ನಿಗದಿಗಾಗಿ ಅಧಿಕಾರಿಗಳು ಕೋರಿದ್ದು, ಜು. 1 ಅಥವಾ 2 ರಂದು ನಿಗದಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಕೆ.ಆರ್.ಸಾಗರದಲ್ಲಿ ಸ್ವಚ್ಛತಾ ಕಾರ್ಯ ಸಿದ್ಧತೆ ಜೋರಾಗಿದೆ. ಅಣೆಕಟ್ಟೆ ಭರ್ತಿಯಾದಾಗ ಪ್ರತಿವರ್ಷ ಮುಖ್ಯಮಂತ್ರಿ ಅವರು ಸಚಿವ ಸಂಪುಟ ಸಹೋದ್ಯೋಗಿಗಳೊಂದಿಗೆ ಕಾವೇರಿ ಮಾತೆಗೆ ಬಾಗಿನ ಅರ್ಪಿಸುವ ವಾಡಿಕೆ 1979 ರಿಂದ ಚಾಲ್ತಿಯಲ್ಲಿದೆ.

ಅಣೆಕಟ್ಟೆಗೆ ಮೊದಲ ಬಾರಿಗೆ 1979ರಲ್ಲಿ ಅಂದಿನ ಮುಖ್ಯಮಂತ್ರಿ ಡಿ.ದೇವರಾಜ ಅರಸು ಬಾಗಿನ ಅರ್ಪಿಸಿದ್ದರು. ತದನಂತರ ರಾಜ್ಯದ ಮುಖ್ಯಮಂತ್ರಿಗ ಆದವರು ಈ ಸಂಪ್ರದಾಯವನ್ನು ಮುಂದುವರಿಸಿದರು. ಇದುವರೆವಿಗೆ ಒಂದು ಬಾರಿ ಅಂದರೆ 1988ರಲ್ಲಿ ರಾಜ್ಯಪಾಲ ವೆಂಕಟಸುಬ್ಬ ಅವರು ಬಾಗಿನ ಅರ್ಪಿಸಿದ್ದು ಬಿಟ್ಟರೆ ಅಣೆಕಟ್ಟೆ ಭರ್ತಿಯಾದಾಗಲೆಲ್ಲ ಮುಖ್ಯಮಂತ್ರಿ ಆದವರು ಬಾಗಿನ ಅರ್ಪಿಸಿದ್ದಾರೆ.

ಮಾಜಿ ಸಿಎಂ ದಿ.ಗುಂಡೂರಾವ್, ಎಚ್.ಡಿ.ದೇವೇಗೌಡ, ಜೆ.ಎಚ್.ಪಟೇಲ್, ಸದಾನಂದಗೌಡ, ಜಗದೀಶ್ ಶೆಟ್ಟರ್, ತಲಾ ಒಂದು ಬಾರಿ, ರಾಮಕೃಷ್ಣ ಹೆಗಡೆ, ವೀರಪ್ಪ ಮೊಯ್ಲಿ, ಎಸ್.ಎಂ.ಕೃಷ್ಣ, ಧರ್ಮಸಿಂಗ್, ಬಸವರಾಜ ಬೊಮ್ಮಾಯಿ ತಲಾ ಎರಡು ಬಾರಿ, ವಿರೇಂದ್ರ ಪಾಟೀಲ್ ಒಂದು ಬಾರಿ, ಬಂಗಾರಪ್ಪ ಹಾಗೂ ಎರಡು ಅವಧಿಯಲ್ಲಿ ಮುಖ್ಯಂತ್ರಿಯಾಗಿದ್ದ, ಎಚ್.ಡಿ.ಕುಮಾರಸ್ವಾಮಿ ಅವರು ತಲಾ ಮೂರು ಬಾರಿ, ಎರಡು ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ 5 ಬಾರಿ ಅರ್ಪಿಸಿದ್ದಾರೆ. ಸಿದ್ದರಾಮಯ್ಯ ಮೂರು ಬಾರಿ ಬಾಗಿನ ಅರ್ಪಿಸಿದ್ದು, ಈ ಬಾರಿ ಬಾಗಿನ ಅರ್ಪಿಸಿದರೆ ಅದು ನಾಲ್ಕನೇಯದು ಆಗಲಿದೆ. ಸಿದ್ದರಾಮಯ್ಯ ಮೊದಲ 5 ವರ್ಷದ ಅವಧಿಯಲ್ಲಿ ಮೊದಲ ಎರಡು ವರ್ಷ ಬಾಗಿನ ಅರ್ಪಿಸಿದ್ದರು. ನಂತರ ಮೂರು ವರ್ಷ ಅಣೆಕಟ್ಟೆ ಭರ್ತಿಯಾಗಿರಲಿಲ್ಲ. ಕಳೆದ 2024 ರ ಜೂ. 29 ರಂದು ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದ್ದರು.

1979 ರಿಂದ 2025ರ ತನಕ 13 ಬಾರಿ ಅಣೆಕಟ್ಟೆ ಭರ್ತಿಯಾಗದ ಕಾರಣ ಅಂದು ಮುಖ್ಯಮಂತ್ರಿಯಾಗಿದ್ದವರು ಬಾಗಿನ ಅರ್ಪಿಸಲು ಸಾಧ್ಯವಾಗಿಲ್ಲ. ಇಲ್ಲಿಯ ತನಕ ಅಣೆಕಟ್ಟೆ ತುಂಬಿದ ಸಂದರ್ಭದಲ್ಲಿ 15 ಮುಖ್ಯಮಂತ್ರಿಗಳು ಬಾಗಿನ ಅರ್ಪಿಸಿದ್ದಾರೆ.

ಈ ಬಾರಿ ಜೂನ್ ತಿಂಗಳಲ್ಲಿಯೇ ಒಳಹರಿವು ಹೆಚ್ಚಾಗಿ ಅಣೆಕಟ್ಟೆ ಭರ್ತಿಯಾಗುವತ್ತ ಸಾಗಿದ್ದು, ಈ ತಿಂಗಳ ಅಂತ್ಯದಲ್ಲಿ ತುಂಬುವ ಸಾಧ್ಯತೆ ಹೆಚ್ಚಿದು, ಜುಲೈ ತಿಂಗಳ ಮೊದಲ ವಾರದಲ್ಲಿ ಬಾಗಿನ ಅರ್ಪಿಸುವ ಸಾಧ್ಯತೆ ಹೆಚ್ಚಿದೆ. ಮುಖ್ಯಮಂತ್ರಿ ಅವರು ದಿನಾಂಕ ನಿಗದಿಗಾಗಿ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net