

ಬೆಂಗಳೂರು: ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿಕೆ ಮುಂದೆ ಮಾಡಿ, ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಹಿಂದಿನ ಅಧ್ಯಕ್ಷ ಎಚ್.ಕಾಂತರಾಜು ವರದಿ ಸ್ವೀಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೋರಿಸಿರುವ ಆಸಕ್ತಿ ಸದುದ್ದೇಶದ್ದಲ್ಲ. ಅಧಿಕಾರ ದಾಹ, ಸ್ವಾರ್ಥದ ಬೇಳೆ ಬೇಯಿಸಿಕೊಳ್ಳಲು ಎಲ್ಲಿಲ್ಲದ ಕಾಳಜಿವಹಿಸಿದ್ದಾರೆ ಎಂದು ಬಿಜೆಪಿ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಟೀಕಿಸಿದರು.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಜಾತಿ ಗಣತಿ ವೈಜ್ಞಾನಿಕವಾಗಿ ನಡೆದಿಲ್ಲ. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಸಮೀಕ್ಷೆಯೂ ಸಮರ್ಪಕವಾಗಿ ಆಗಿಲ್ಲ. ಇದರಿಂದಾಗಿ ಆಯೋಗದ ಅಂದಿನ ಸದಸ್ಯ ಕಾರ್ಯದರ್ಶಿ ಸಹಿ ಹಾಕಿಲ್ಲವೆಂಬ ಮಾಹಿತಿ ತಿಳಿದು, ಒಕ್ಕಲಿಗ, ವೀರಶೈವ-ಲಿಂಗಾಯತ ಸಮುದಾಯಗಳು ಸೇರಿ ವಿವಿಧ ಕ್ಷೇತ್ರಗಳು ಪ್ರಮುಖರು ವಿರೋಧಿಸುತ್ತಿದ್ದಾರೆ ಎಂದು ಹೇಳಿದರು.
ಜಾತಿ ಗಣತಿಗೆ ಬಿಜೆಪಿ ವಿರೋಧವಾಗಿಲ್ಲ. ಆದರೆ ಸಂವಿಧಾನಬದ್ಧ, ಸಮರ್ಪಕ ವೈಜ್ಞಾನಿಕ ಹಾಗೂ ನಿಷ್ಪಕ್ಷಪಾತವಾಗಿ ಸಮಗ್ರ ಸಮೀಕ್ಷೆ ನಡೆಸಲು ಬಯಸುತ್ತದೆ. ಈಗ ಆಕ್ಷೇಪಿಸುತ್ತಿರುವವರ ನಿಲುವು ಇದೇ ಆಗಿದೆ. ಆದರೂ ಕಾಂಗ್ರೆಸ್ ಪಕ್ಷವು ರಾಜಕೀಯ ಲಾಭ, ಚುನಾವಣೆಯಲ್ಲಿ ಅನುಕೂಲವಾಗುತ್ತದೆ ಎಂದು ಅಂದಾಜಿಸಿ, ಅಪೂರ್ಣ ವರದಿ ಸ್ವೀಕಾರಕ್ಕೆ ಒಲವು ಹೊಂದಿದೆ ಎಂದು ಡಾ.ಸಿ.ಎನ್.ಅಶ್ವತ್ಥ ನಾರಾಯಣ ದೂರಿದರು.
ಒಡೆದಾಳುವುದು ಸಿಎಂ ಸಿದ್ದರಾಮಯ್ಯ ರಾಜಕೀಯ ತಂತ್ರಗಾರಿಕೆಯಾಗಿದೆ. ಇತರೆ ಹಿಂದುಳಿದ ವರ್ಗಗಳ ಎಲ್ಲ ಸಮುದಾಯಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದೇ ವಿರಳ. ಹಿಂದುಳಿದ ವರ್ಗಗಳ ಹೆಸರಿನಲ್ಲಿ ಜಾತಿ ರಾಜಕಾರಣ ಮಾಡುತ್ತಾ ಬಂದಿದ್ದಾರೆ. ಇದೀಗ ಕಾಂತರಾಜು ವರದಿ ಸ್ವೀಕಾರ ಅಚಲವೆನ್ನುತ್ತಾ ಹಿಂದುಳಿದ ವರ್ಗಗಳನ್ನು ವಿಭಜಿಸಿ ಜಾತಿಗಳನ್ನು ಪರಸ್ಪರ ಎತ್ತಿ ಕಟ್ಟಲು ಹುನ್ನಾರ ಹೂಡಿದ್ದಾರೆ. ಈ ವರದಿ ವಿಚಾರದಲ್ಲಿ ಸರ್ಕಾರದ ನಿರ್ಧಾರ ಗಮನಿಸಿ ಮುಂದಿನ ನಡೆಯ ಬಗ್ಗೆ ಬಿಜೆಪಿ ಆಲೋಚಿಸಲಿದೆ ಎಂದು ಹೇಳಿದರು.
ಅಂತಾರಾಷ್ಟ್ರೀಯ ಕೆಂಪೇಗೌಡ ವಿಮಾನ ನಿಲ್ದಾಣದ ಬಳಿ ನಮ್ಮ ಸರ್ಕಾರದ ಅವಧಿಯಲ್ಲಿ ನಾಡಪ್ರಭು ಕೆಂಪೇಗೌಡರ ಪುತ್ಥಳಿ ಸ್ಥಾಪಿಸಲಾಯಿತು. ಪಕ್ಕದಲ್ಲೇ ವೈಶಿಷ್ಟ್ಯಪೂರ್ಣ ಥೀಮ್ ಪಾರ್ಕ್ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕಳೆದ ಆರು ತಿಂಗಳಿಂದ ಕಾಮಗಾರಿ ನಿಲ್ಲಿಸಿದೆ. ನಾಡಪ್ರಭುವಿನ ವಿಷಯದಲ್ಲೂ ಪಕ್ಷ ರಾಜಕಾರಣ ಮಾಡುತ್ತಿದೆ ಎಂದು ಡಾ.ಸಿ.ಎನ್.ಅಶ್ವತ್ಥ ನಾರಾಯಣ ಆರೋಪಿಸಿದರು.
ಜಾಗತಿಕಮಟ್ಟದ ಬೇಡಿಕೆ, ಬದಲಾವಣೆಗೆ ಅನುಗುಣವಾಗಿ ಯುವ ಸಮೂಹವನ್ನು ಸನ್ನದ್ಧಗೊಳಿಸಲು ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಜಾರಿಗೊಳಿಸಲಾಗಿತ್ತು. ಸಂಸತ್ತಿನಲ್ಲಿ ಈ ನೀತಿಗೆ ಕಾಂಗ್ರೆಸ್ ಅನುಮೋದಿಸಿದೆ. ಆದರೆ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯುತ್ತಲೇ ಎನ್ ಇಪಿ ರದ್ದುಪಡಿಸಲು ತೀರ್ಮಾನಿಸಿದೆ. ಸರ್ಕಾರಕ್ಕೆ ಏನಾದರೂ ಸಿಟ್ಟಿದ್ದರೆ ನಮ್ಮ ಮೇಲೆ ತೀರಿಸಿಕೊಳ್ಳಲಿ. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುವುದು ಸರಿಯಲ್ಲವೆಂದು ಆಕ್ಷೇಪಿಸಿದರು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕೀಳು ಅಭಿರುಚಿಯ ಪೋಸ್ಟರ್ ಅಂಟಿಸಿದ್ದರಲ್ಲಿ ಪೊಲೀಸರ ಚಿತಾವಣೆಯಿದೆ. ಪ್ರತಿಪಕ್ಷಗಳು ಪೋಸ್ಟರ್ ಅಂಟಿಸಲು ಮುಂದಾದರೆ ಪೊಲೀಸರು ಕೂಡಲೇ ಪ್ರತ್ಯಕ್ಷರಾಗಿ ತೆರವುಗೊಳಿಸುತ್ತಾರೆ. ಆದರೆ ಎಚ್ ಡಿಕೆ ವಿರುದ್ಧ ಪೋಸ್ಟರ್ ಅಂಟಿಸಲು ಬಿಟ್ಟಿದ್ದಾರೆ. ಈ ಕೃತ್ಯ ಎಸಗಿದವರನ್ನು ಹಿಡಿದು ಕ್ರಮಕೈಗೊಳ್ಳುವಲ್ಲೂ ಉದಾಸೀನ ಮಾಡಿದ್ದಾರೆ ಎಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಆಕ್ರೋಶ ವ್ಯಕ್ತಪಡಿಸಿದರು.