

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವಾಹನ ಸಂಚಾರಕ್ಕೆ ನೀಡಲಾಗಿದ್ದ ಝೀರೋ ಟ್ರಾಫಿಕ್ ಸೌಲಭ್ಯವನ್ನು ಹಿಂಪಡೆಯುವಂತೆ ನಗರ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದಾರೆ.
ಭದ್ರತೆಯ ಕಾರಣದಿಂದ ರಾಜ್ಯದ ಮುಖ್ಯಮಂತ್ರಿ ಸಂಚರಿಸುವ ಮಾರ್ಗದಲ್ಲಿ ಝೀರೋ ಟ್ರಾಫಿಕ್ ಹೇರಲಾಗುತ್ತದೆ. ಈ ಸಂದರ್ಭದಲ್ಲಿ ಯಾವುದೇ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುವುದಿಲ್ಲ. ಸಿಎಂ ವಾಹನ ಹಾಗೂ ಅವರ ಭದ್ರತೆಗೆ ನಿಯೋಜನೆಗೊಂಡಿರುವ ಬೆಂಗಾವಲು ವಾಹನ ತೆರಳಿದ ನಂತರದಲ್ಲಿ ರಸ್ತೆಯನ್ನು ಸಾರ್ವಜನಿಕ ಸಂಚಾರಕ್ಕೆ ಬಿಟ್ಟುಕೊಡಲಾಗುತ್ತದೆ. ಇದರಿಂದ ಬಹುತೇಕ ಸಂದರ್ಭದಲ್ಲಿ ವಾಹನ ಸವಾರರು ಟ್ರಾಫಿಕ್ನಲ್ಲಿ ಕಾಯಬೇಕಾದ ಪರಿಸ್ಥಿತಿ ಬಂದೊದಗುತ್ತದೆ.
ಇದೀಗ ಸಿಎಂ ಸಿದ್ದರಾಮಯ್ಯ ತನ್ನ ಸಂಚಾರದ ಸಂದರ್ಭದಲ್ಲಿ ಝೀರೋ ಟ್ರಾಫಿಕ್ ಸೌಲಭ್ಯ ಬೇಡವೆಂದು ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ್ದು, ನನ್ನ ವಾಹನ ಸಂಚಾರಕ್ಕೆ ನೀಡಲಾಗಿರುವ ಜೀರೋ ಟ್ರಾಫಿಕ್ ಸೌಲಭ್ಯವನ್ನು ಹಿಂದಕ್ಕೆ ಪಡೆಯುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದೇನೆ. ಜೀರೋ ಟ್ರಾಪಿಕ್ನಿಂದಾಗಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವುದನ್ನು ಕಂಡು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ತಿಳಿಸಿದ್ದಾರೆ.