

ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿಯಾಗಿ ಎರಡನೇ ಬಾರಿ ಅಧಿಕಾರ ವಹಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ಆಗಸ್ಟ್ 3ರಂದು ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಮುಖ್ಯಮಂತ್ರಿಯಾದ ಬಳಿಕ ದೆಹಲಿಗೆ ಎರಡನೇ ಬಾರಿ ಪ್ರವಾಸ ಮಾಡುತ್ತಿದ್ದಾರೆ.
ಗುರುವಾರ ಬೆಳಗ್ಗೆ ಸಿಎಂ ಸಿದ್ದರಾಮಯ್ಯನವರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ರಾಜ್ಯದ ಅಭಿವೃದ್ದಿ ಕುರಿತು ಚರ್ಚಿಸಲಿದ್ಧಾರೆ. ಅದೇ ದಿನ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್, ರಕ್ಷಣಾ ಸಚಿವರಾದ ರಾಜನಾಥ ಸಿಂಗ್ ಹಾಗೂ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಲಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆ ನಿಮಿತ್ತ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯ ಕಾಂಗ್ರೆಸ್ ನಾಯಕರ ಸಭೆ ಕರೆದಿದ್ದು, ಅದನ್ನು ಮುಗಿಸಿಕೊಂಡು ಸಿಎಂ ರಾಜ್ಯಕ್ಕೆ ವಾಪಸ್ ಆಗಲಿದ್ದಾರೆ ಎಂದು ಅಧಿಕೃತ ಸುದ್ದಿ ಮೂಲಗಳು ತಿಳಿಸಿವೆ.