

ಬೆಂಗಳೂರು: ಈ ಬಾರಿಯ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೀನುಗಾರರಿಗೆ ಭರಪೂರ ಪ್ರೋತ್ಸಾಹವನ್ನು ನೀಡಿದ್ದು, ಹಲವಾರು ಕೊಡುಗೆಗಳನ್ನು ನೀಡಿದ್ದಾರೆ.
ಮೀನುಗಾರ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹಾಗೂ ವಹಿವಾಟು ವಿಸ್ತರಣೆಗೆ ನೆರವಾಗಲು ಬ್ಯಾಂಕುಗಳಲ್ಲಿ ಬಡ್ಡಿರಹಿತವಾಗಿ ನೀಡುವ ಸಾಲದ ಮಿತಿಯನ್ನು 50,000 ರೂ. ಗಳಿಂದ ಮೂರು ಲಕ್ಷ ರೂ. ಗಳಿಗೆ ಹೆಚ್ಚಿಸಲಾಗುವುದು ಎಂದು ಬಜೆಟ್ ವೇಳೆ ಸಿಎಂ ಹೇಳಿದ್ದಾರೆ. ಮೀನುಗಾರಿಕಾ ದೋಣಿಗಳಲ್ಲಿನ ಸೀಮೆ ಎಣ್ಣೆ ಇಂಜಿನ್ಗಳನ್ನು ಪೆಟ್ರೋಲ್/ಡೀಸೆಲ್ ಇಂಜಿನ್ಗಳಾಗಿ ಬದಲಾಯಿಸಲು ತಲಾ 50,000 ರೂ. ಸಹಾಯಧನ ನೀಡುವುದರ ಜತೆಗೆ ಪ್ರಸಕ್ತ ಸಾಲಿನಲ್ಲಿ 4000 ಸೀಮೆ ಎಣ್ಣೆ ಇಂಜಿನ್ಗಳ ಬದಲಾವಣೆಗೆ 20 ಕೋಟಿ ರೂ. ಸಹಾಯಧನ ಒದಗಿಸಲಾಗುವುದು ಎಂದಿದ್ದಾರೆ.
ಇದನ್ನೂ ಓದಿ: ಶಿಸ್ತು ಕಾಪಾಡಲು ಹೋಗಿ ಕೆಲಸ ಕಳೆದುಕೊಂಡ ಶಿಕ್ಷಕಿ…
ಅಲ್ಲದೇ ಮೀನುಗಾರರ ದೋಣಿಗಳಿಗೆ ರಿಯಾಯಿತಿ ದರದಲ್ಲಿ ನೀಡುತ್ತಿರುವ ಡೀಸೆಲ್ ಮಿತಿಯನ್ನು ಒಂದೂವರೆ ಲಕ್ಷ ಕಿಲೋ ಲೀಟರ್ನಿಂದ ಎರಡು ಲಕ್ಷ ಕಿಲೋ ಲೀಟರ್ಗಳವರೆಗೆ ಹೆಚ್ಚಿಸಲಾಗುವುದು. ಇದರಿಂದ ಮೀನುಗಾರರಿಗೆ ಸರ್ಕಾರದಿಂದ 250 ಕೋಟಿ ರೂ.ಗಳಷ್ಟು ನೆರವಾಗಲಿದೆ ಎಂದು ಸಿಎಂ ತಿಳಿಸಿದ್ದಾರೆ.
ರಾಜ್ಯದ ಜಲಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡು ಹೆಚ್ಚಿನ ಮೀನು ಮರಿಗಳನ್ನು ಉತ್ಪಾದಿಸುವ ಮೂಲಕ ಒಳನಾಡು ಮೀನುಗಾರಿಕೆಗೆ ಇರುವ ವಿಪುಲ ಅವಕಾಶಗಳನ್ನು ಉಪಯೋಗಿಸಿಕೊಳ್ಳಲಾಗುವುದು. ಜೊತೆಗೆ, ಹೆಚ್ಚಿನ ಬೇಡಿಕೆಯಿರುವ ಕಾಟ್ಲಾ ಮತ್ತು ರೋಹು ಮೀನು ಮರಿಗಳನ್ನು ಅಧಿಕ ಪ್ರಮಾಣದಲ್ಲಿ ಉತ್ಪಾದಿಸಿ ಒಳನಾಡು ಮೀನುಗಾರಿಕೆಯನ್ನು ಪ್ರೋತ್ಸಾಹಿಸಲಾಗುವುದು ಎಂದಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ NEP ರದ್ದು! 9ನೇ 10ನೇ ತರಗತಿ ವಿದ್ಯಾರ್ಥಿಗಳಿಗೂ ವಾರದಲ್ಲಿ ಎರಡು ದಿನ ಮೊಟ್ಟೆ/ಬಾಳೆಹಣ್ಣು/ಶೇಂಗಾ ಚಿಕ್ಕಿ ವಿತರಣೆ…
ಜತೆಗೆ ಸೀಗಡಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಉತ್ತಮ ಮಾರುಕಟ್ಟೆಯನ್ನು ಕಲ್ಪಿಸಲು ಕ್ರಮವಹಿಸಲಾಗುವುದು. ಮೀನುಗಾರಿಕೆಗೆ ಈಗ ಲಭ್ಯವಿರುವ ಶೈತ್ಯಾಗಾರಗಳನ್ನು ದುಪ್ಪಟ್ಟುಗೊಳಿಸಲು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಸಿಎಂ ಹೇಳಿದ್ದಾರೆ.(ಏಜೆನ್ಸೀಸ್)