

ಬೆಂಗಳೂರು: ದಲ್ಲಾಳಿಗಳು ಮುಕ್ತ ಸರ್ಕಾರಿ ಕಚೇರಿಗಳು ಜನಸೇವೆಗೆ ಸಮರ್ಥವಾಗಿರುತ್ತವೆ. ನಿರ್ಗತಿಕನ ಕಣ್ಣೊರೆಸುವ ಕೆಲಸ ಮಾಡಿದಾಗ ಸಿಗುವ ತೃಪ್ತಿ ಬೇರೆ ಯಾವುದರಲ್ಲೂ ಸಿಗುವುದಿಲ್ಲ ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿತನುಡಿದರು.
ಕೆಎಎಸ್ ಸಂಘದ ಸಭಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 2024ರ ದಿನಚರಿ, ಕ್ಯಾಲೆಂಡರ್ ಬಿಡುಗಡೆ ಮಾಡಿದರು. 2020ರ ಬ್ಯಾಚ್‌ನ ತಹಸೀಲ್ದಾರರ ಪೈಕಿ ಸಾಂಕೇತಿಕವಾಗಿ ಕೆಲವರಿಗೆ ಸತ್ಕರಿಸಲಾಯಿತು.
ನಂತರ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಇತ್ತೀಚಿನ ಜನಸ್ಪಂದನ ಕಾರ್ಯಕ್ರಮದಲ್ಲಿ ಅಹವಾಲುಗಳ ಮಹಾಪೂರವೇ ಹರಿದುಬಂತು. ಈ ಪೈಕಿ ಶೇ.50ಕ್ಕೂ ಹೆಚ್ಚು ಕಂದಾಯ ಇಲಾಖೆಗೆ ಸೇರಿದ್ದಾಗಿದ್ದು, ಅವೂ ಸ್ಥಳೀಯ ಹಂತಕ್ಕೆ ಸೇರಿದ್ದವು.
ದೂರದ ಊರುಗಳಿಂದ ಜನರು ಹಣ ಖರ್ಚು ಮಾಡಿಕೊಂಡು ಬರುತ್ತಾರೆಂದರೆ ಆಡಳಿತ ಸಮರ್ಪಕವಾಗಿಲ್ಲವೆಂದು ಅರ್ಥವಾಗುತ್ತದೆ. ತಹಸೀಲ್ ಕಚೇರಿಗೆ ಬರುವ ಬಡವರು, ದುರ್ಬಲರ ಅಹವಾಲಿಗೆ ತ್ವರಿತವಾಗಿ ಸ್ಪಂದಿಸುವುದು ಕರ್ತವ್ಯ, ಸಮಾಜ ಸೇವೆಯಾಗಿದೆ ಎಂದರು.
ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗುರಿ ಜನ ಸೇವೆಯಾಗಿದೆ. ಜನಪ್ರತಿನಿಧಿಗಳು ಐದು ವರ್ಷಕ್ಕೊಮ್ಮೆ ಆಯ್ಕೆಯಾಗುತ್ತಾರೆ. ಜನರು ಬಯಸಿದರೆ ನವೀಕರಣ ಇಲ್ಲವೇ ಮನೆ ಸೇರುತ್ತಾರೆ. ಆದರೆ ಅಧಿಕಾರಿಗಳಿಗೆ 30 ವರ್ಷಗಳ ಕಾಲ ಜನರಿಗೆ ಸೇವೆ ಸಲ್ಲಿಸುವ ಅವಕಾಶವಿದೆ ಎಂದರು.
ಅಧಿಕಾರಿಗಳು ಉತ್ತಮ ಆಡಳಿತ, ಸೇವೆ ಸಲ್ಲಿಸಿ, ಜನೋಪಯೋಗಿ ಕಾರ್ಯಕ್ರಮಗಳನ್ನು ಸರಿಯಾಗಿ ತಲುಪಿಸಿದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ಬಲಾಢ್ಯರು ದುರ್ಬಲರ ಮೇಲೆ ದಬ್ಬಾಳಿಕೆ ನಡೆಸದಂತೆ, ಸವಲತ್ತುಗಳು ಅರ್ಹ ಲಾನುಭವಿಗಳಿಗೆ ತಲುಪಿಸಲು ಶ್ರಮಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಹೇಳಿದರು.
ಕಂದಾಯ ಸಚಿವ ಕೃಷ್ಣಬೈರೇಗೌಡ ಮಾತನಾಡಿ ಸಿಎಂ ನಿರ್ದೇಶನದಂತೆ ಕಂದಾಯ ಇಲಾಖೆಯಲ್ಲಿ ಬದಲಾವಣೆ, ಸುಧಾರಣೆ ತರಲು ಪ್ರಯತ್ನಿಸುತ್ತಿದ್ದು, ಅರ್ಧದಷ್ಟು ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ ಎಂದು ಹೇಳಿದರು.
ಕಾಯ್ದೆ ಜಾರಿಯಾಗಿ ಅನೇಕ ವರ್ಷಗಳಾಗಿದ್ದರೂ ಹಟ್ಟಿ, ತಾಂಡಾದಂತಹ ಜನವಸತಿ ಪ್ರದೇಶಗಳಿಗೆ ಗ್ರಾಮಗಳ ಸ್ಥಾನಮಾನ ಲಭಿಸಿಲ್ಲ. ನಿರಂತರ ಪ್ರಯತ್ನದ ಲವಾಗಿ ಅಲ್ಪಾವಧಿಯಲ್ಲಿ ಒಂದು ಸಾವಿರ ಜನವಸತಿ ಪ್ರದೇಶಗಳಿಗೆ ಗ್ರಾಮಗಳ ಸ್ಥಾನಮಾನ ನೀಡಲಾಗಿದೆ ಎಂದರು.
ರಾಜ್ಯದ ಆಡಳಿತ ದೇಶಕ್ಕೆ ಮಾದರಿಯಾಗಿದ್ದು, ಜನಪರ ಕಾಳಜಿ, ಸರಳತೆಯ ಪರಂಪರೆ ಮುಂದುವರಿಸಿಕೊಂಡು ಹೋಗಬೇಕಾಗಿದೆ. ಅನೇಕ ವರ್ಷಗಳಿಂದ ಜಮೆಯಾಗಿರುವ ನ್ಯೂನತೆಗಳು ಜನರಿಗೆ ಹೊರೆಯಾಗಿ ಪರಿಣಮಿಸಿದ್ದು, ಸಾಮಾಜಿಕ ನ್ಯಾಯ ಮತ್ತು ಉತ್ತಮ ಆಡಳಿತ ಸರ್ಕಾರದ ಲಕ್ಷ್ಯವಾಗಿದೆ ಎಂದು ಕೃಷ್ಣಬೈರೇಗೌಡ ತಿಳಿಸಿದರು.
ಕೆಎಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ಬಿ.ಶಿವಸ್ವಾಮಿ ಅಧ್ಯಕ್ಷತೆವಹಿಸಿ ಮಾತನಾಡಿದರು. ನಗರಾಭಿವೃದ್ಧಿ ಸಚಿವ ಬಿ.ಎಸ್.ಸುರೇಶ್, ಸಿಎಂ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜ್, ಮುಖ್ಯ ಕಾರ್ಯದರ್ಶಿ ಡಾ.ರಜನೀಶ್ ಗೋಯಲ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ, ಆಯುಕ್ತ ಪಿ.ಸುನಿಲ್‌ಕುಮಾರ್, ಸಂಘದ ಉಪಾಧ್ಯಕ್ಷ ಕೆ.ಚನ್ನಬಸಪ್ಪ, ಕಾರ್ಯದರ್ಶಿ ಸಿ.ಎಲ್.ಶಿವಕುಮಾರ್ ಇದ್ದರು.