ಯಾವ ರಾಜ್ಯದಲ್ಲೂ ಇಷ್ಟು ದೊಡ್ಡ ಕಾರ್ಯಕ್ರಮ ಇಲ್ಲ, ಕೊಟ್ಟ ಮಾತಂತೆ ನಡೆದುಕೊಂಡಿದ್ದೇವೆ: ಸಿಎಂ ಸಿದ್ದರಾಮಯ್ಯ

Siddaramaiah
Published on

ಮೈಸೂರು: ಯಾವ ಸರ್ಕಾರವೂ ಕೂಡ ಕೊಟ್ಟ ಮಾತನ್ನು ನೂರು ದಿನದಲ್ಲಿ ಈಡೇರಿಸಿಲ್ಲ. ಕೊಟ್ಟ ಮಾತಿನಂತೆ ನಾವು ನಡೆದುಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಮೈಸೂರಿನ ಮಹಾರಾಜ ಕಾಲೇಜು ಮೈದಾನದ ಬೃಹತ್​ ವೇದಿಕೆಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ ಬಳಿಕ ಸಿದ್ದರಾಮಯ್ಯ ಅವರು ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದರು.

ಈ ತಿಂಗಳು 27ಕ್ಕೆ ನಮ್ಮ ಸರ್ಕಾರಕ್ಕೆ ನೂರು ದಿನ ತುಂಬಿವೆ. ಹೀಗಾಗಿ ನೂರು ದಿನದ ಸಾಧನೆ ಕೈಪಿಡಿಯನ್ನು‌ ಬಿಡುಗಡೆ ಮಾಡಿದ್ದೇವೆ. ರಾಜ್ಯದ ಜನತೆಯ ಮುಂದೆ ನಮ್ಮ ಜವಾಬ್ದಾರಿ ಮುಂದಿಟ್ಟಿದ್ದೇವೆ. ಯಾವ ಸರ್ಕಾರ ಕೂಡ ಕೊಟ್ಟ ಮಾತನ್ನು ನೂರು ದಿನದಲ್ಲಿ ಈಡೇರಿಸಿಲ್ಲ. ಪ್ರಣಾಳಿಕೆಯಲ್ಲಿ ನಾವು ಭರವಸೆ ಕೊಟ್ಟಿದ್ದೇವು. ಹೀಗಾಗಿ ಪ್ರಣಾಳಿಕೆ ಸಮರ್ಪಕವಾಗಿ ಜಾರಿ ಮಾಡಬೇಕಾದದ್ದು ನಮ್ಮ ಧರ್ಮ. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ ಎಂದರು.

ಐದು ವರ್ಷ ನಾವು ಕೊಟ್ಟ ಭರವಸೆಗಳನ್ನು ಈಡೇರಿಸುತ್ತೇವೆ. 1.26 ಕೋಟಿ ಕುಟುಂಬದ ಯಜಮಾನಿಗೆ ಹಣ ಹಾಕಿದ್ದೇವೆ. ವರ್ಷಕ್ಕೆ 24 ಸಾವಿರ ರೂಪಾಯಿ ಹಣ ಜನರಿಗೆ ಸಿಗುತ್ತದೆ. ಯಾವ ರಾಜ್ಯದಲ್ಲೂ ಇಷ್ಟು ದೊಡ್ಡ ಕಾರ್ಯಕ್ರಮ ಇಲ್ಲ ಎಂದರು. ಕಾಂಗ್ರೆಸ್​ ಸರ್ಕಾರ ಸದಾ ಬಡವರ ಪರವಾಗಿ ಇರಲಿದೆ ಎಂದರು.

ಅಕ್ಕಿ ಕೊಡ್ತೀವಿ ಎಂದು ಹೇಳಿ ಕೇಂದ್ರ ಸರ್ಕಾರ ಕೈಕೊಟ್ಟಿತು. ನಮ್ಮ ಕಾರ್ಯಕ್ರಮ ಯಶಸ್ವಿಯಾಗುತ್ತೆ ಅಂತ ಅಕ್ಕಿಯನ್ನು ಕೇಂದ್ರ ಸರ್ಕಾರ ಕೊಡಲಿಲ್ಲ. ಅದಕ್ಕೆ ನಾವು ಹಣ ಕೊಡುವ ತೀರ್ಮಾನಕ್ಕೆ ಬಂದೆವು. ಗೃಹಜ್ಯೋತಿ ಯೋಜನೆಯಲ್ಲಿ 200 ಯೂನಿಟ್ ಪುಕ್ಕಟೆಯಾಗಿ ವಿದ್ಯುತ್ ಕೊಟ್ಟಿದ್ದೇವೆ. ನೋಂದಣಿ ಮಾಡಿಕೊಂಡವರಿಗೆ ಶೂನ್ಯ ಬಿಲ್ ಬರ್ತಿದೆ. ಬಿಜೆಪಿ, ಜೆಡಿಎಸ್ ಮತ್ತು ಪಿಎಂ ಮೋದಿಯವರು ಸಹ ಗ್ಯಾರಂಟಿ ಯೋಜನೆ ಕೊಡಲು ಆಗಲ್ಲ ಅಂದಿದ್ದರು. ಆರ್ಥಿಕವಾಗಿ ದಿವಾಳಿಯಾಗುತ್ತೆ ಅಂತೆಲ್ಲ ಹೇಳಿದರು. ಈಗಾಗಲೇ ನಾವು ನಾಲ್ಕು ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ. ಯುವನಿಧಿ ಯೋಜನೆಯನ್ನು ಡಿಸೆಂಬರ್ ಅಥಾವ ಜನವರಿಯಲ್ಲಿ ಜಾರಿಗೆ ತರುತ್ತೇವೆ ಎಂದರು.

ನಮ್ಮ ಪಕ್ಷ ಬಡವರು, ಹಿಂದುಳಿದವರು, ಮಹಿಳೆಯರು ಹಾಗೂ ಯುವಕರ ಪರವಾಗಿದೆ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಇದಕ್ಕೆ ನಿರ್ದೇಶನ ನಿಮ್ಮ ಮುಂದಿದೆ. ವಿಪಕ್ಷಗಳ ಹೇಳೋದೆಲ್ಲವೂ ಸುಳ್ಳು ಎನ್ನುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net