

ಬಾಗಲಕೋಟೆ: ಇಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮ ಹೆಲಿಪ್ಯಾಡ್ನಲ್ಲಿ ಭಾಷಣ ಮಾಡಿದ ಸಿಎಂ ಸಿದ್ದರಾಮಯ್ಯ, ತಮ್ಮ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದ ಅನಂತಕುಮಾರ ಹೆಗಡೆ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದು, ಅದು ಅವರ ಸಂಸ್ಕ್ರತಿ. ಅವರನ್ನು ಸುಸಂಸ್ಕೃತರು ಅಂತ ಹೇಳಲು ಸಾಧ್ಯವೇ? ಎಂದು ಹೇಳಿದ್ದಾರೆ.
"ಅನಂತಕುಮಾರ ಹೆಗಡೆ ಕೇಂದ್ರ ಮಂತ್ರಿ ಆಗಿದ್ದಾಗ, ನಾವು ಅಧಿಕಾರಕ್ಕೆ ಬಂದಿರೋದೆ ಸಂವಿಧಾನ ಬದಲಾವಣೆ ಮಾಡೋಕೆ ಎಂದು ಹೇಳಿದ್ದರು. ಅವರಿಂದ ನಾವು ಸಂಸ್ಕೃತಿ ಬಯಸೋಕೆ ಆಗುತ್ತಾ? ಸುಸಂಸ್ಕೃತರು ಎಂದು ಹೇಳಲು ಸಾಧ್ಯವೇ? ಅವರ ಭಾಷೆ ಬಳಕೆ, ಅವರು ಇಂತವೇ ಮಾತಾಡೋದು" ಎಂದರು.
"ರಾಜ್ಯದ ಮುಖ್ಯಮಂತ್ರಿಗೆ ಗೌರವ ಕೊಡುವವರು ಇದ್ದಾರೆ, ಕೊಡದೇ ಇರೋರು ಇದ್ದಾರೆ. ರಾಜಕೀಯವಾಗಿ ಮಾತನಾಡುವವರಿಗೆ ಗೌರವ ಕೊಡಿ ಅಂತ ಹೇಳೋಕೆ ಆಗುತ್ತಾ? ಅವರು ರಾಜಕೀಯವಾಗಿ ಅಶ್ಲೀಲ ಪದಗಳನ್ನು ಬಳಸಿದರೆ, ಅದು ಅವರ ಘನತೆಗೆ ಕುಂದು ಬರುತ್ತೆ ವಿನಃ ನನಗಲ್ಲ" ಎಂದು ತಿರುಗೇಟು ನೀಡಿದ್ದಾರೆ.