

ಬೆಂಗಳೂರು: ಅನಧಿಕೃತ ಕುದುರೆ ರೇಸ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಭಾರಿ ಜಾಲವನ್ನು ಬೆಂಗಳೂರು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಭೇದಿಸಿದ್ದು, ಬೆಟ್ಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದ 66 ಮಂದಿಯನ್ನು ಬಂಧಿಸಿ 3.50 ಕೋಟಿ ರೂಪಾಯಿ ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು ಟರ್ಫ್ ಕ್ಲಬ್ ಆವರಣದಲ್ಲಿ ಜ.12ರಂದು ಟರ್ಫ್ ಕ್ಲಬ್ ಪರ ಇರುವ ಬುಕ್ಕಿಗಳೆಂದು ಹೇಳಿಕೊಂಡು ಸಾರ್ವಜನಿಕರು ಮತ್ತು ಪಂಟರುಗಳಿಂದ ಬೆಟ್ಟಿಂಗ್ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಅಕ್ರಮ ರೇಸ್ ನಡೆಸುತ್ತಿದ್ದರು. ಇನ್ನು ಪರವಾನಗಿ ಪಡೆದ ಕೆಲವು ಏಜೆಂಟರು ಸರ್ಕಾರದ ಆದೇಶಗಳನ್ನು ಸ್ಟಾಲ್‌ಗಳಲ್ಲಿ ಪ್ರಕಟಿಸದೆ, ಸರಿಯಾದ ಲೆಕ್ಕ ನಿರ್ವಹಣೆ ಮಾಡದೆ, ಗ್ರಾಹಕರಿಂದ ಸಂಗ್ರಹಿಸಿದ ಹಣಕ್ಕೆ ಯಾವುದೇ ಸೂಕ್ತ ದಾಖಲೆಗಳನ್ನು ನಿರ್ವಹಿಸದೆ ಅನಧಿಕೃತ ರೇಸ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿಸಿಕೊಂಡಿದ್ದರು. ಇದರಿಂದ ಸರ್ಕಾರಕ್ಕೆ ಲಕ್ಷಾಂತರ ರೂ.ತೆರಿಗೆ ವಂಚಿಸಲಾಗುತ್ತಿತ್ತು.
ಈ ಕುರಿತು ಖಚಿತ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು ದಾಳಿ ನಡೆಸಿ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿದ್ದ 66 ಮಂದಿಯನ್ನು ಬಂಧಿಸಿ, 3,45,78,140 ರೂ., 55 ಮೊಬೈಲ್‌ಗಳು ಮತ್ತು ಇತರೆ ದಾಖಲಾತಿಗಳನ್ನು ವಶಕ್ಕೆ ಪಡೆದು ಕೊಂಡಿರುತ್ತಾರೆ. 9 ಮಂದಿ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಹೈಗ್ರೌಂಡ್ಸ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.