ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ತಿರುಪತಿಗೆ ತುಪ್ಪ ಪೂರೈಕೆ ಸ್ಥಗಿತಗೊಳಿಸಲಾಗಿದೆ: ಕಟೀಲ್ ಟ್ವೀಟ್​​ಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ

SIDDARAMAIAH
Published on

ಬೆಂಗಳೂರು: ದೇವಸ್ಥಾನ ಹಾಗೂ ಹಿಂದೂಗಳ ಶ್ರದ್ಧೆ-ಭಕ್ತಿಯ ವಿಚಾರದಲ್ಲಿ ಅಸಡ್ಡೆ ತೋರುವ ಕಾಂಗ್ರೆಸ್ ನೀತಿಯಿಂದಾಗಿ ತಿರುಪತಿ ಲಡ್ಡುವಿಗೆ ನಂದಿನಿ ತುಪ್ಪ ಸರಬರಾಜು ಸ್ಥಗಿತಗೊಂಡಿದೆ. ತಿರುಪತಿಯೊಂದಿಗಿನ 50 ವರ್ಷಗಳ ಪರಂಪರೆಗೆ ಎಳ್ಳು ನೀರು ಬಿಡಲಾಗಿದ್ದು, ಹಿಂದೂಗಳೆಡಗಿನ ಸಿದ್ದರಾಮಯ್ಯ ಅವರ ತಾತ್ಸಾರ ನೀತಿ ರುಜುವಾತಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದರು.

ಇದೀಗ ನಳಿನ್ ಕುಮಾರ್ ಕಟೀಲ್ ಟ್ವೀಟ್​​​ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಅವರು "ಆಂಧ್ರಪ್ರದೇಶದ ತಿರುಪತಿಗೆ ನಂದಿನಿ ತುಪ್ಪ ಪೂರೈಕೆ ಸ್ಥಗಿತಗೊಂಡಿರುವುದು ಇಂದು, ನಿನ್ನೆಯ ವಿಚಾರವಲ್ಲ. ಕಳೆದ ಒಂದೂವರೆ ವರ್ಷದ ಹಿಂದೆಯೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ತಿರುಪತಿಗೆ ತುಪ್ಪ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ.

ಮಾನ್ಯ ಸಂಸದ ನಳಿನ್ ಕುಮಾರ್ ಕಟೀಲ್ ಅವರೇ ಈಗ ಹೇಳಿ, ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಹಿಂದೂ ಧಾರ್ಮಿಕ ಶ್ರದ್ಧಾ ಭಕ್ತಿಯ ವಿರೋಧಿಯೋ ?

ನಮಗೆ ಜನರ ಧಾರ್ಮಿಕ ನಂಬಿಕೆಯ ಜೊತೆಗೆ ಹೈನುಗಾರರ ಬದುಕು ಮುಖ್ಯ. ಹೀಗಾಗಿ ನಾಡಿನ ರೈತರ ಹಿತದೃಷ್ಟಿಯಿಂದ ನಾವು ಕೇಳುವ ದರ ನೀಡಲು ತಿರುಪತಿ ದೇವಾಲಯದವರು ಒಪ್ಪುವುದಾದರೆ ತುಪ್ಪ ಪೂರೈಸಲು ನಮಗೆ ಯಾವ ಸಮಸ್ಯೆಯಿಲ್ಲ ಎಂದು ಟ್ವೀಟ್ ಮಾಡಿದ್ದಾರೆ'' ಸಿದ್ದರಾಮಯ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net