ಅನೈತಿಕ ಸಂಬಂಧ ಹಿನ್ನೆಲೆ ವ್ಯಕ್ತಿಯ ಕೊಲೆ; ಮನೆಯ ಬಳಿಯೇ ಶವ ಹೊತ್ತೊಯ್ದ ಅಸಾಮಿ!

murder
Published on

ಆನೇಕಲ್: ಕೊಲೆ ಮಾಡಿದ ಹಂತಕನಿಂದಲೇ ಕೊಲೆ ರಹಸ್ಯ ಬಯಲಾಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನಲ್ಲಿ ನಡೆದಿದೆ. ಕೊಲೆ ಮಾಡಿ, ಮರುದಿನ ಶವವನ್ನು ಬೈಕ್​​​​ನಲ್ಲಿ ತಂದಿದ್ದಾನೆ ಆರೋಪಿ. ತನ್ನ ಎಕ್ಸೆಲ್ ವಾಹನದಲ್ಲಿ ಮೃತದೇಹವನ್ನ ಕಟ್ಟಿಕೊಂಡು ಬಂದಿದ್ದ ಹಂತಕ, ಕೊಲೆಯಾದ ವ್ಯಕ್ತಿಯ ಮನೆಯ ಬಳಿಯೇ ಶವ ಹೊತ್ತೊಯ್ದಿದ್ದಾನೆ. ಕಾಣೆಯಾಗಿದ್ದ ಮನೆಯೊಡೆಯನ ಶವ ಕಂಡು ಕುಟುಂಬಸ್ಥರು ಶಾಕ್ ಆಗಿದ್ದಾರೆ.

ಅನೈತಿಕ ಸಂಬಂಧ ಹಿನ್ನೆಲೆ ವ್ಯಕ್ತಿಯ ಕೊಲೆ?
ಇಟ್ಟಿಗೆಯಿಂದ ತಲೆಗೆ ಹೊಡೆದು ವ್ಯಕ್ತಿಯ ಕೊಲೆ ಮಾಡಲಾಗಿದೆ ಎನ್ನಲಾಗಿದ್ದು, ಆನೇಕಲ್ ತಾಲ್ಲೂಕಿನ ಮುಗಳೂರು ಸಮೀಪದ ನಿರ್ಜನ ಪ್ರದೇಶದಲ್ಲಿ ಈ ಕೃತ್ಯವೆಸಗಲಾಗಿದೆ. ಮೊಹಮ್ಮದ್ ಸಲೀಂ(೩೮) ಕೊಲೆಯಾದ ವ್ಯಕ್ತಿ. ಐದು ಮಕ್ಕಳ ತಾಯಿಯಾಗಿದ್ದ ಸಲೀಂ ಪತ್ನಿಯ ಜೊತೆ ಚರಣ್ ಅನೈತಿಕ ಸಂಬಂಧ ಹೊಂದಿದ್ದ. ನಿನ್ನೆ ರಾತ್ರಿ ಚರಣ್, ಬರ್ತಡೇ ಇದೆ ಎಂದು ಮೊಹಮ್ಮದ್ ಸಲೀಂನನ್ನು ಕರೆದೊಯ್ದಿದ್ದ. ಆ ನಂತರ ನಿರ್ಜನ ಪ್ರದೇಶದಲ್ಲಿ ಎಣ್ಣೆ ಪಾರ್ಟಿ ಮಾಡಿ ಬಳಿಕ ಕೊಲೆ ಮಾಡಲಾಗಿದೆ. ಇಟ್ಟಿಗೆಯಿಂದ ಸಲೀಂ ತಲೆಗೆ ಹೊಡೆದು ಚರಣ್ ಹಾಗೂ ನಾರಾಯಣಪ್ಪ ಕೊಲೆ ಮಾಡಿದ್ದಾರೆ.

ಚರಣ್ ಹಾಗೂ ನಾರಾಯಣಪ್ಪ ಜೊತೆ ಮೊಹಮ್ಮದ್ ಸಲೀಂ ಮದ್ಯ ಸೇವಿಸಲು ಹೋಗಿದ್ದ ವಿಷಯ ಕುಟುಂಬಸ್ಥರಿಗೆ ತಿಳಿದಿತ್ತು. ಆದರೆ ಮೊಹಮ್ಮದ್ ಸಲೀಂ ಕಾಣದೆ ಇದ್ದಾಗ ನಾರಾಯಣಪ್ಪನ ಬಳಿ ಕುಟುಂಬಸ್ಥರು ವಿಚಾರಿಸಿದ್ದಾರೆ. ಆಗ ಕೊಲೆ ಮಾಡಿದ್ದ ಜಾಗಕ್ಕೆ ಹೋಗಿ ನಾರಾಯಣಪ್ಪ ಮೃತ ದೇಹವನ್ನ ತೆಗೆದುಕೊಂಡು ಬಂದಿದ್ದಾನೆ. ಟಿವಿಎಸ್ ಎಕ್ಸೆಲ್ ನಲ್ಲಿ ಕಳೆದ ರಾತ್ರಿ ನಾರಾಯಣಪ್ಪ ಮೃತದೇಹವನ್ನ ತೆಗೆದುಕೊಂಡು ಬಂದಿದ್ದು, ಎಕ್ಸೆಲ್ ಬೈಕ್ ನಲ್ಲಿ ಶವವನ್ನ ಕಟ್ಟಿಕೊಂಡು ಗ್ರಾಮಕ್ಕೆ ಬಂದಿದ್ದಾನೆ.

ಪ್ರಕರಣ ದಾಖಲು
ನಾರಾಯಣಪ್ಪ ಮೊಹಮ್ಮದ್ ಸಲೀಂ ಕುಟುಂಬಸ್ಥರ ಮನೆಯ ಮುಂದೆಯೇ ಶವ ತೆಗೆದುಕೊಂಡು ಬಂದ ಮೇಲೆ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಸರ್ಜಾಪುರ ಪೋಲೀಸರು ಭೇಟಿ ನೀಡಿದ್ದಾರೆ. ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿ ಪ್ರಕರಣ ದಾಖಲು ಮಾಡಲಾಗಿದೆ. ಆರೋಪಿಗಳಾದ ಚರಣ್ ಮತ್ತು ನಾರಾಯಣಪ್ಪ ಎಂಬುವವರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net