

ಬೆಂಗಳೂರು: ಕಾಂಗ್ರೆಸ್ ಸರ್ಕಾರ(Congress Government) ಘೋಷಿಸಿರುವ ಗ್ಯಾರಂಟಿಗಳನ್ನು ಆರ್ಥಿಕವಾಗಿ ಸಾಮರ್ಥ್ಯವುಳ್ಳವರು ತ್ಯಜಿಸಿ, ಇಲ್ಲದವರಿಗೆ ತಲುಪುವಂತೆ ಮಾಡಿ ಎಂದು ಸಿಎಂ ಸಿದ್ದರಾಮಯ್ಯ(CM Siddaramaiah) ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ.
'ಉಳ್ಳವರು' ದೊಡ್ಡ ಮನಸ್ಸಿನಿಂದ 'ಇಲ್ಲದವರ'ನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಗ್ಯಾರಂಟಿ(Gaurantee) ಯೋಜನೆಗಳನ್ನು ಬಿಟ್ಟುಕೊಟ್ಟರೆ ಅದು ರಾಜ್ಯ ಸರ್ಕಾರದ ಮೇಲಿರುವ ಆರ್ಥಿಕ ಹೊರೆಯನ್ನು ಕಡಿತಗೊಳಿಸುತ್ತದೆ. ಇದರಿಂದ ಆ ಹಣವನ್ನು ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಉಪಯೋಗಿಸಬಹುದು ಎಂದು ಸಿಎಂ ಪತ್ರದಲ್ಲಿ ಉಲ್ಲೇಖಿಸಿ ಹೇಳಿದ್ದಾರೆ.
ಸರ್ಕಾರಿ ಅಧಿಕಾರಿಗಳು, ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿರುವವರು ಮತ್ತು ಮಾಧ್ಯಮಗಳ ಮುಖ್ಯಸ್ಥರು ಗೃಹ ಜ್ಯೋತಿ(Gruha Jyothi) ಯೋಜನೆಯನ್ನು ಬಿಟ್ಟುಕೊಡುವುದಾಗಿ ನನಗೆ ಪತ್ರ ಬರೆದಿದ್ದಾರೆ. ಈ ಯೋಜನೆಯ ಲಾಭದಿಂದ ಹೊರಗುಳಿಯಲು ಬಯಸುವವರಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದ್ದಾರೆ.
ಈ ಹಿಂದೆ ಕೇಂದ್ರ ಸರ್ಕಾರವು ಅಡುಗೆ ಅನಿಲ ಸಬ್ಸಿಡಿಯನ್ನು ತ್ಯಜಿಸುವಂತೆ ಜನರಲ್ಲಿ ಅಭಿಯಾನ ಮಾಡಿತ್ತು. ಅನೇಕರು ಈ ಅಭಿಯಾನಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದರು. ಅದೇ ರೀತಿಯಲ್ಲಿ ನಮ್ಮ ಗ್ಯಾರಂಟಿಗಳನ್ನು ಕೂಡ ತ್ಯಜಿಸಬಹುದು ಎಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್(DK Shivakumar) ಹೇಳಿದ್ದಾರೆ. (ಏಜೆನ್ಸೀಸ್)