

ಬೆಂಗಳೂರು: ಪ್ರಸ್ತುತ ನಡೆಯುತ್ತಿರುವ ಕುಂಭಮೇಳದಲ್ಲಿ ಬಿಜೆಪಿ ನಾಯಕರು ಪುಣ್ಯಸ್ನಾನ ಮಾಡುತ್ತಿರುವುದನ್ನು ಟೀಕಿಸುವ ಭರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಈ ವಿಚಾರ ಬಿಜೆಪಿ ಹಾಗೂ ಕಾಂಗ್ರೆಸ್ಸಿನವರ ನಡುವಿನ ವಾಗ್ದಾಳಿಗೆ ಕಾರಣವಾಗಿದೆ. ಇದೀಗ ಸಿಎಂ ಸಿದ್ದರಾಮಯ್ಯ (CM Siddaramaiah) ಎಐಸಿಸಿ ಅಧ್ಯಕ್ಷರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ನಾವು ಬಸವಣ್ಣನವರ ತತ್ವ ಪಾಲಕರು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ (CM Siddaramaiah), ಅದರ ಬಗ್ಗೆ ಅವರನ್ನೇ ಕೇಳಿ, ನಾವು ಬಸವಣ್ಣ ತತ್ವ ಪಾಲಕರು. ನನ್ನ ಅಭಿಪ್ರಾಯ ಕೂಡಾ ಅಷ್ಟೇ. ನಮ್ಮ ಸಂಪ್ರದಾಯ ಇದು ಅಷ್ಟೇ ಎಂದು ಹೇಳಿದ್ದಾರೆ.
ಕುಂಭಮೇಳದಲ್ಲಿ ಸ್ನಾನ ಮಾಡೋರು, ಗಂಗೆಯಲ್ಲಿ ಸ್ನಾನ ಮಾಡೋದು ಪಾಪ ಪರಿಹಾರ ಆಗುತ್ತೆ ಅಂತ ನಂಬಿಕೆ ಇದೆ. ಆದರೆ ನಾವೆಲ್ಲ ಬಸವಣ್ಣನವರ ಅನುಯಾಯಿಗಳು. ಪಾಪ, ಪುಣ್ಯ ಎಲ್ಲಾ ಹೆಂಗೆ? ಅಯ್ಯಾ ಎಂದರೆ ಸ್ವರ್ಗ… ಎಲವೋ ಎಂದರೆ ನರಕ ಅನ್ನೋದ್ರಲ್ಲಿ ನಂಬಿಕೆ ಇಟ್ಟುಕೊಂಡಿರುವವರು ಎಂದು ಸಿಎಂ ಸಿದ್ದರಾಮಯ್ಯ ಎಐಸಿಸಿ ಅಧ್ಯಕ್ಷರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ಸೇರಿದಂತೆ ಬಿಜೆಪಿ ನಾಯಕರು ಮಹಾಕುಂಭಮೇಳಕ್ಕೆ ಭೇಟಿ ನೀಡಿ ಪವಿತ್ರಸ್ನಾನ ಮಾಡುತ್ತಿರುವ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಟೀಕಿಸಿದ್ದು, ಗಂಗಾಸ್ನಾನ ಮಾಡುವುದರಿಂದ ಬಡತನ ನಿರ್ಮೂಲನೆಯಾಗುವುದಿಲ್ಲ.
ಬಿಜೆಪಿ ನಾಯಕರು ಕ್ಯಾಮೆರಾಗಳಿಗಾಗಿ ಗಂಗಾ ನದಿಯಲ್ಲಿ ಸ್ನಾನ ಮಾಡಲು ಪರಸ್ಪರ ಪೈಪೋಟಿ ನಡೆಸುತ್ತಿದ್ದಾರೆ. ಬಿಜೆಪಿ ಹಾಗೂ ಆರ್ಎಸ್ಎಸ್ ನಾಯಕರು ದ್ರೋಹಿಗಳು. ಧರ್ಮದ ಹೆಸರಿನಲ್ಲಿ ಬಡವರ ಶೋಷಣೆ ಮಾಡುತ್ತಿದ್ದಾರೆ. ಈ ರೀತಿಯ ಶೋಷಣೆಯನ್ನು ಕಾಂಗ್ರೆಸ್ ಎಂದಿಗೂ ಸಹಿಸುವುದಿಲ್ಲ ಎಂದು ಹೇಳಿದ್ದರು. ಈ ವಿಚಾರ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವಿನ ಕೆಸರೆರಚಾಟಕ್ಕೆ ಕಾರಣವಾಗಿತ್ತು.