

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬದಲಿ 14 ನಿವೇಶನಗಳ ಹಂಚಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಖಭಂಗ ನಿಶ್ಚಿತವೆಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ನಾಡಹಬ್ಬ ಮೈಸೂರು ಉದ್ಘಾಟನಾ ವೇದಿಕೆಯನ್ನು ರಾಜಕೀಯ ತೆವಲು ತೀರಿಸಿಕೊಳ್ಳಲು ಬಳಸಿರುವುದು ಖಂಡನೀಯ, ನಾಡಿನ ಜನರಿಗೆ ಮಾಡಿದ ಅಪಮಾನವೆಂದು ಟೀಕಿಸಿದರು.
ದಸರಾ ಹಬ್ಬಕ್ಕೆ ಚಾಲನೆ ನೀಡಿದ ಸಮಾರಂಭದಲ್ಲೂ ಸಿಎಂ ಸಿದ್ದರಾಮಯ್ಯ ಮುಡಾ ವಿಚಾರದ ಜಪ ಮಾಡುತ್ತಾ ತಾವು ತಪ್ಪು ಮಾಡಿಲ್ಲವೆಂದು ಪದೇ ಪದೆ ಸಾರಿದ್ದಾರೆ. ಜತೆಯಲ್ಲಿ ಇರುವವರಿಗೆ ಪ್ರೇರಣೆ ನೀಡಿ ಸರ್ಟಿಫಿಕೇಟ್ ತೆಗೆದುಕೊಳ್ಳುವ ಕೆಲಸ ಮಾಡಿದ್ದಾರೆ ಎಂದು ಛಲವಾದಿ ಕಾಲೆಳೆದರು.
ಮುಡಾ ಅಕ್ರಮ ವಿರೋಧಿಸಿ ಬೆಂಗಳೂರಿನಿಂದ ಮೈಸೂರು ಚಲೋ ಜಂಟಿ ಪಾದಯಾತ್ರೆಯಲ್ಲಿ ಶಾಸಕ ಜಿ.ಟಿ.ದೇವೇಗೌಡ ಪಾಲ್ಗೊಂಡಿದ್ದರು. ಇದೀಗ ತಮ್ಮ ತಪ್ಪು ಮುಚ್ಚಿಕೊಳ್ಳೂವುದಕ್ಕಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಓಲೈಸಿದ್ದಾರೆ ಎಂದರು.
ಬಿಜೆಪಿ-ಜೆಡಿಎಸ್ ಅಂದರೆ ಎನ್‌ಡಿಎ ಮೇಲೆ ಆರೋಪ ಹೊರಿಸಲು ಕಾಂಗ್ರೆಸ್‌ನಲ್ಲಿ ಒಂದು ಪಡೆಯೇ ಸಿದ್ಧವಾಗಿದೆ. ಈ ಸಂದರ್ಭದಲ್ಲಿ ಎರಡೂ ಪಕ್ಷಗಳ ಮುಖಂಡರು ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ ಕೋರಿದರು.
ನಾಲ್ವರು ಸಚಿವರಾದ ಡಾ.ಜಿ.ಪರಮೇಶ್ವರ್, ಎಚ್.ಕೆ.ಪಾಟೀಲ, ಕೃಷ್ಣಬೈರೇಗೌಡ ಹಾಗೂ ಸತೀಶ ಜಾರಕಿಹೊಳಿ ಬಹುದೊಡ್ಡ ಭೂಹಗರಣ ಹೊರ ಹಾಕಿದ್ದೇವೆ ಎಂದುಕೊಂಡಿದ್ದಾರೆ. ಆದರೆ ನಾಲ್ವರು ಸಚಿವರು ಬೆಟ್ಟು ಅಗೆದು ಇಲಿ ಹಿಡಿದಿದ್ದಾರೆ.
ನ್ಯಾಯಾಲಯದಲ್ಲಿ ಇತ್ಯರ್ಥವಾದ ಪ್ರಕರಣವನ್ನು ಮುನ್ನೆಲೆಗೆ ತಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಹಿರಿಯ ಸಚಿವರಿಗೆ ಇದರ ಬಗ್ಗೆ ಅರಿವು ಇರಲಿಲ್ಲವೆ ? ವಿಪಕ್ಷ ನಾಯಕ ಸ್ಥಾನಕ್ಕೆ ಆರ್.ಅಶೋಕ್ ಕೊಡಬೇಕಾಗಿಲ್ಲ ಎಂದರು.
ಮುಗಿದು ಹೋದ ಪ್ರಕರಣಕ್ಕೆ ಮುಡಾ ಕೇಸ್ ಹೋಲಿಕೆ ಮಾಡುತ್ತಿರುವುದು ಹಾಸ್ಯಾಸ್ಪದ. ಮುಡಾ ಪ್ರಕರಣದಲ್ಲಿ ಇ.ಡಿ. ಪ್ರವೇಶಿಸಿಯಾಗಿದ್ದು, ಸೈಟ್‌ಗಳನ್ನು ಹಿಂತಿರುಗಿಸಿದ ಮಾತ್ರಕ್ಕೆ ಸರಿಹೋಯಿತು ಎಂದಲ್ಲ. ಪ್ರಕರಣ ತನಿಖೆ, ಕೋರ್ಟ್‌ನಲ್ಲಿರುವಾಗ ನಿವೇಶನ ವಾಪಸ್ ಮಾಡಿದ್ದೂ ತಪ್ಪು ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಕ್ಷೇತ್ರದಲ್ಲೇ ದಲಿತರಿಗೆ ದೇವಾಲಯ ಪ್ರವೇಶ ತಡೆಹಿಡಿಯಲಾಗಿದೆ. ಕಾಂಗ್ರೆಸ್ಸಿಗರು ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಾರೆ. ದಲಿತರ ಬಗ್ಗೆ ಡಿಸಿಎಂಗೆ ನೈಜ ಕಾಳಜಿಯಿದ್ದರೆ ದಲಿತರಿಗೆ ದೇವಾಲಯ ಪ್ರವೇಶಿಸಲು ಅವಕಾಶ ಕಲ್ಪಿಸಬೇಕು. ಬಾಬಾಸಾಹೇಬರ ಸಂವಿಧಾನದಂತೆ ನ್ಯಾಯ ಕೊಡಿಸದಿದ್ದರೆ ಜನರು ಛೀಮಾರಿ ಹಾಕುತ್ತಾರೆ ಎಂದು ಎಚ್ಚರಿಸಿದರು.
ದೇಶ ಮೆಚ್ಚಿದ ವ್ಯಕ್ತಿ-ಶಕ್ತಿ ವೀರಸಾರ್ವಕರ್ ಬಗ್ಗೆ ಮಾತನಾಡುವಂತಹ ಯೋಗ್ಯತೆಯೂ ಇಲ್ಲದ ಸಚಿವ ದಿನೇಶ್ ಗುಂಡೂರಾವ್ ಅವರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಇತಿಮಿತಿ ತಿಳಿಯದ ದಿನೇಶ್ ಗುಂಡೂರಾವ್ ಎಲ್ಲೆಲ್ಲಿ ಏನೇನು ತಿನ್ನುತ್ತಿದ್ದರು ಎಂದು ಇಡೀ ಶಿವಾಜಿನಗರಕ್ಕೆ ಗೊತ್ತಿದೆ ಎಂದು ಛಲವಾದಿ ನಾರಾಯಣಸ್ವಾಮಿ ಕುಟುಕಿದರು.