ರಾಜ್ಯದ ಜನರ ಶ್ರೇಯೋಭಿವೃದ್ಧಿ ಸಾಧಿಸಲು ನಮ್ಮ ಸರ್ಕಾರ ಬದ್ಧ: ಸಿಎಂ

ವಿಜಯವಾಣಿ - 2024-08-15T115843.764
Published on

ಬೆಂಗಳೂರು: ಸ್ವಾತಂತ್ರ್ಯೋತ್ಸವ ಎನ್ನುವುದು ಕೇವಲ ಸಂಭ್ರಮಾಚರಣೆಯ ದಿನ ಆಗಬಾರದು, ಇದು ಪ್ರಜೆಗಳಾದ ನಮ್ಮೆಲ್ಲರ ಕರ್ತವ್ಯವನ್ನು ನೆನಪು ಮಾಡಿಕೊಳ್ಳುವ ದಿನವೂ ಆಗಬೇಕು. ಪ್ರಜೆಗಳಾಗಿ ನಾವು ಪ್ರತಿಕ್ಷಣವೂ ಜಾಗೃತರಾಗಿದ್ದು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ದಮನ ಮಾಡುವ ದುಷ್ಟಶಕ್ತಿಗಳ ಕುಟಿಲ ಪ್ರಯತ್ನವನ್ನು ವಿಫಲಗೊಳಿಸಿ ಅದನ್ನು ರಕ್ಷಿಸುವ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ. 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಶುಭಾಶಯಗಳು ಎಂದು ಸಿಎಂ ಸಿದ್ದರಾಮಯ್ಯ, ನಾಡಿನ ಜನತೆಗೆ ಸಂದೇಶವೊಂದನ್ನು ರವಾನಿಸಿದ್ದಾರೆ.

"ಈ ಕರ್ತವ್ಯದ ಪಾಲನೆಯೇ ನಿಜವಾದ ದೇಶಭಕ್ತಿ, ಇದು ತ್ಯಾಗ-ಬಲಿದಾನದ ಮೂಲಕ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಮ್ಮ ಹಿರಿಯರಿಗೆ ಸಲ್ಲಿಸುವ ಗೌರವವೂ ಹೌದು. ದೇಶಭಕ್ತಿ ಎನ್ನುವುದು ನನ್ನ ಪಾಲಿಗೆ ಕೇವಲ ರಾಜಕೀಯ ಬೂಟಾಟಿಕೆಯ ಘೋಷಣೆ ಅಲ್ಲ. ಅದು ನಾಡಿನ ಪ್ರತಿಯೊಬ್ಬ ಪ್ರಜೆಯ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ದಿ ಹಾಗೂ ಸಾಮಾಜಿಕ ಸಾಮರಸ್ಯದ ರಕ್ಷಣೆಯ ಹೊಣೆಗಾರಿಕೆಯ ಸಂಕಲ್ಪ. ಈ ಹೊಣೆಗಾರಿಕೆಯನ್ನು ಪ್ರಾಮಾಣಿಕವಾಗಿ ನೆರವೇರಿಸಿ ರಾಜ್ಯದ ಜನರ ಶ್ರೇಯೋಭಿವೃದ್ಧಿ ಸಾಧಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಇದಕ್ಕೆ ಎದುರಾಗುವ ಸವಾಲುಗಳಿಂದ ಕುಗ್ಗುವ, ಜಗ್ಗುವ ಇಲ್ಲವೇ ಹಿಮ್ಮೆಟ್ಟುವ ಪ್ರಶ್ನೆಯೇ ಇಲ್ಲ. ಈ ಹೋರಾಟದ ಕಿಚ್ಚಿಗೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಬದುಕೇ ದೊಡ್ಡ ಸ್ಪೂರ್ತಿ" ಎಂದರು.

"ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನಾವು ಎದುರಿಸಿದ್ದ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇಂದು ಸಾಧ್ಯವಾಗಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತಿದೆ. ಬಡತನ, ಅನಕ್ಷರತೆ, ನಿರುದ್ಯೋಗ ಸಮಸ್ಯೆಗಳನ್ನು ಯಶಸ್ವಿಯಾಗಿ ಎದುರಿಸಿದ್ದೇವೆ. ಆಹಾರ ಉತ್ಪಾದನೆಯಲ್ಲಿ ನಾವು ಸ್ವಾವಲಂಬನೆಯನ್ನು ಸಾಧಿಸಿದ್ದೇವೆ. ಆದರೆ ಜಾತಿ ಮತ್ತು ಧರ್ಮದ ಸೋಗಿನಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಸಾಮರಸ್ಯವನ್ನು ಕೆಡಿಸುವ ಪ್ರಯತ್ನ ನಮ್ಮ ಅಭಿವೃದ್ಧಿಯ ಓಟಕ್ಕೆ ತೊಡರುಗಾಲಾಗಿದೆ. ಇಂತಹ ಪ್ರಯತ್ನಗಳನ್ನು ಭಂಗಗೊಳಿಸಿ ಶರಣರು, ಸಂತರು, ಸೂಫಿಗಳು, ದಾರ್ಶನಿಕರು ಜನ್ಮ ತಳೆದ ನಮ್ಮ ಕನ್ನಡನಾಡನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಯೇ ಉಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ" ಎಂದು ಹೇಳಿದರು.

"ನಮ್ಮ ರಾಜ್ಯದ ಸರ್ವರನ್ನೂ ಒಳಗೊಂಡ ಸುಸ್ಥಿರ ಅಭಿವೃದ್ಧಿ ಮಾದರಿ ಇಂದು 'ಕರ್ನಾಟಕ ಮಾದರಿ' ಎಂದು ದೇಶಪ್ರಸಿದ್ಧವಾಗಿದೆ ಎಂದು ಹೇಳಲು ನನಗೆ ಹೆಮ್ಮೆ ಅನಿಸುತ್ತಿದೆ. ನಮ್ಮ ರಾಜ್ಯ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ಸಾಧಿಸಿದ್ದು, ಹಲವು ಕ್ಷೇತ್ರಗಳಲ್ಲಿ ದೇಶಕ್ಕೆ ಮಾದರಿಯಾಗಿದೆ. ವಿಜ್ಞಾನ, ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ನಮ್ಮ ರಾಜ್ಯ ಮುಂಚೂಣಿಯಲ್ಲಿದೆ. ಮೂಲಸೌಕರ್ಯಗಳ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಕೈಗಾರಿಕಾ ಅಭಿವೃದ್ಧಿ, ಕೌಶಾಲ್ಯಾಭಿವೃದ್ಧಿ, ಆರೋಗ್ಯ, ಶಿಕ್ಷಣ, ಸಮಾಜ ಕಲ್ಯಾಣ, ಉದ್ಯೋಗ ಸೃಷ್ಟಿ, ಜನಸ್ನೇಹಿ ಆಡಳಿತ ನಮ್ಮ ಕನಸು ಮಾತ್ರವಲ್ಲ, ಇದೇ ಗುರಿಯಾಗಿದೆ. ಈ ಗುರಿ ಸಾಧನೆಯತ್ತ ಮುನ್ನಡೆಯುವುದೇ ನಮ್ಮ ಧ್ಯೇಯವಾಗಿದೆ" ಎಂದು ತಮ್ಮ ಎಕ್ಸ್​ ಖಾತೆಯಲ್ಲಿ ಬರೆದು, ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net