

ಬೆಂಗಳೂರು: ಗ್ಯಾರಂಟಿ ಯೋಜನೆಗಳಿಂದಾಗಿ ಖಜಾನೆ ಬರಿದಾಗುತ್ತಿದೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ತೆರಿಗೆ ಹೆಚ್ಚಳ ಮಾಡುತ್ತಾರೆ ಎಂಬೆಲ್ಲ ಆರೋಪಗಳ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ತೆರಿಗೆ ಸಂಗ್ರಹಣಾ ಇಲಾಖೆಗಳ ಜತೆ ಸಭೆ ನಡೆಸುತ್ತಿರುವುದು ಕುತೂಹಲ ಮೂಡಿಸಿದೆ.
ರಾಜಧಾನಿಯ ಶಕ್ತಿ ಭವನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಸಭೆ ನಡೆಸುತ್ತಿದ್ದು, ತೆರಿಗೆ ಸಂಗ್ರಹಣಾ ಇಲಾಖೆಗಳಾಗಿರುವ ವಾಣಿಜ್ಯ ತೆರಿಗೆ ಇಲಾಖೆ, ಅಬಕಾರಿ ಇಲಾಖೆ, ಸಾರಿಗೆ ಇಲಾಖೆ, ನೋಂದಣಿ ಮುತ್ತು ಮುದ್ರಾಂಕ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದಾರೆ.
ಮುಂದಿನ ತಿಂಗಳಲ್ಲಿ ಮಂಡನೆ ಆಗಲಿರುವ ಬಜೆಟ್ ಹಿನ್ನೆಲೆಯಲ್ಲೂ ಈ ಮಹತ್ವದ ಸಭೆ ನಡೆಯುತ್ತಿದ್ದು, ಯಾವ ಯಾವ ಇಲಾಖೆಯಿಂದ ಎಷ್ಟು ತೆರಿಗೆ ಎಷ್ಟು ಬಾಕಿ ಇದೆ, ಒಂದು ವೇಳೆ ತೆರಿಗೆ ಹೆಚ್ಚಳ ಮಾಡಬೇಕಾದರೆ ಯಾವ ಇಲಾಖೆಗಳಲ್ಲಿ ಮಾಡಬಹುದು ಎಂಬುದರ ಬಗ್ಗೆ ಸಭೆಯಲ್ಲಿ ಮುಖ್ಯಮಂತ್ರಿ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ.