

ಬೆಂಗಳೂರು: 'ನಿಮ್ಮ ವ್ಯವಹಾರ ಹೆಚ್ಚಿಸಿಕೊಳ್ಳಲು ನಿಯಮ ಮೀರಿ ಒಬ್ಬರೇ ಸಾಲಗಾರರಿಗೆ ಮೇಲಿಂದ ಮೇಲೆ ಸಾಲ ಕೊಡುತ್ತಿದ್ದೀರಿ. ಸಾಲ ತೀರಿಸಲು ಸಾಧ್ಯವಾಗದಿದ್ದಾಗ ನಿಯಮ ಬಾಹಿರ ಕ್ರಮಕ್ಕೆ ಮುಂದಾಗುತ್ತಿದ್ದೀರಿ. ಇದನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ' ಎಂದು ಮೈಕ್ರೋ ಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಆಗಿ ಎಚ್ಚರಿಸಿದರು.
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಾರ್ಯಾಚರಣೆ ಮತ್ತು ಅವುಗಳ ಪರಿಣಾಮ, ಮುಂದಿನ ಕ್ರಮಗಳ ಕುರಿತು ಚರ್ಚೆಗೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಶನಿವಾರ ಕರೆದಿದ್ದ ಜಂಟಿ ಸಭೆಯಲ್ಲಿ ಅವರು ಮಾತನಾಡಿದರು.
ಆರ್ ಬಿ ಐ ನಿಯಮಗಳನ್ನು ಉಲ್ಲಂಘಿಸಿ ಸಾಲ ನೀಡಿದ ಮೈಕ್ರೋ ಫೈನಾನ್ಸ್ ಕಂಪನಿಗಳ ಪರವಾನಗಿ ರದ್ದುಗೊಳಿಸಲು ಏನು ಕ್ರಮ ಕೈಗೊಂಡಿದ್ದೀರಿ?: ಆರ್ ಬಿ ಐ ಅಧಿಕಾರಿಗಳಿಗೆ ಸಿಎಂ ಪ್ರಶ್ನಿಸಿದರು.
'ಒಬ್ಬರೇ ಸಾಲಗಾರರು ಬೇರೆ ಬೇರೆ ಗುರಿತಿನ ಚೀಟಿ ( ಐ ಡಿ ಕಾರ್ಡ್ ಗಳು) ಕೊಟ್ಟು ಸಾಲ ಪಡೆದಿರುವುದು ನಿಮ್ಮ ದಾಖಲೆಗಳಲ್ಲಿದೆ. ಆದರೆ ಸಾಲಗಾರರು ಈ ರೀತಿ ದುರುಪಯೋಗ ಪಡಿಸಿಕೊಳ್ಳುವುದನ್ನು ತಪ್ಪಿಸಲು ಯಾವ ಪದ್ಧತಿ ಪಾಲಿಸುತ್ತಿದ್ದೀರಿ' ಕಂಪನಿಗಳಿಗೆ ಕೇಳಿದ ಸಿಎಂ
ಆರ್ ಬಿ ಐ ಪರವಾನಗಿ ಪಡೆದಿರುವ ಕಂಪನಿಗಳು ನಿಯಮಬಾಹಿರ ವಸೂಲಿಗೆ ಇಳಿದಿಲ್ಲ, ಆ ರೀತಿ ಮಾಡುತ್ತಿರುವುದು ಪರವಾನಗಿ ಇಲ್ಲದ ಕಂಪನಿಗಳು ಎನ್ನುವ ಉತ್ತರ ಮೈಕ್ರೋ ಕಂಪನಿಯವರಿಂದ ಬಂತು
ಇದಕ್ಕೆ ಸಚಿವ ಕೃಷ್ಣಬೈರೇಗೌಡರು, ಎಚ್.ಕೆ.ಪಾಟೀಲ್, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಕರಾರು ವ್ಯಕ್ತಪಡಿಸಿ, ಪರವಾನಗಿ ಇದ್ದವರೇ ಈ ರೀತಿ ಮಾಡುತ್ತಿದ್ದಾರೆ ಎನ್ನುವ ವರದಿ ನಮಗೆ ಗ್ರೌಂಡ್ ರಿಪೋರ್ಟ್ ನಲ್ಲಿ ಬಂದಿದೆ. ಆದ್ದರಿಂದ ಬಡ ಜನರ ಹಿತಕಾಯಲು ನಾವು ನಿಯಮ ಉಲ್ಲಂಘಿಸುವ ಕಂಪನಿ ಎಂ.ಡಿ ಗಳ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಸಚಿವರು ಸಭೆಯಲ್ಲಿ ಗುಡುಗಿದರು.
ಮಹಿಳೆಯರ, ವೃದ್ಧರ ಮೇಲೆ ದಬ್ಬಾಳಿಕೆ ನಡೆಸಿರುವ ಪತ್ರಿಕಾ ವರದಿಗಳೂ ನಿತ್ಯ ಬರುತ್ತಿವೆ. ನಾನು ಇದನ್ನೆಲ್ಲಾ ಸಹಿಸುವುದಿಲ್ಲ. ನನ್ನ ಜನರ ರಕ್ಷಣೆಗೆ ನಾನು ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದು ಸಿ ಸಿದ್ದರಾಮಯ್ಯ ಸಭೆಯಲ್ಲೇ ಕಠಿಣ ಎಚ್ಚರಿಕೆ ನೀಡಿದರು.
ಈ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಕ್ರೋ ಫೈನಾನ್ಸ್ ಕಂಪನಿಗಳ ಮುಖ್ಯಸ್ಥರು ಹಾಗೂ ಪ್ರತಿನಿಧಿಗಳು ಮುಂದಿಟ್ಟ ಖಾರವಾದ ಪ್ರಶ್ನೆಗಳು.
ನಿಮ್ಮ ಸಿಬ್ಬಂದಿ ನಿಯಮ ಬಾಹಿರವಾಗಿ ಸಾಲ ವಸೂಲಿಗೆ ಇಳಿಯುತ್ತಿರುವುದನ್ನು ನಿಯಂತ್ರಿಸಲು ಏನು ಮಾಡಿದ್ದೀರಿ? ಅಂಥಾ ಸಿಬ್ಬಂದಿ ವಿರುದ್ಧ ನಿಮ್ಮ ಸಂಸ್ಥೆಗಳಿಂದ ಏನು ಕ್ರಮ ಕೈಗೊಂಡಿದ್ದೀರಿ ? ಸಾಲಗಾರರ ಮನೆ ಜಪ್ತಿ ಮಾಡುವ ಮೊದಲು ನೀವು ನ್ಯಾಯಾಲಯದಿಂದ ಅನುಮತಿ ಪಡೆದಿದ್ದೀರಾ?
ಕಾನೂನು ಕೈಗೆತ್ತಿಕೊಳ್ಳಲು ನಿಮ್ಮ ಸಿಬ್ಬಂದಿಗೆ ಅನುಮತಿ ಕೊಟ್ಟವರು ಯಾರು? ಸಾಲ ವಸೂಲಿಗೆ ರೌಡಿಗಳನ್ನು ಬಳಸುತ್ತಿದ್ದೀರಾ ?. ರಿಸರ್ವ್ ಬ್ಯಾಂಕಿನ ಷರತ್ತು ಮತ್ತು ನಿಬಂಧನೆಗಳನ್ನು ಸಾಲಗಾರರಿಗೆ ಅವರ ಆಡು ಭಾಷೆಯಲ್ಲಿ ಅರ್ಥ ಮಾಡಿಸಿದ್ದೀರಾ?
ಆರ್ ಬಿಐ ನಿಯಮ ಮೀರಿ ಸಾಲ ಕೊಡುತ್ತಿದ್ದೀರಾ ? ಮರುಪಾವತಿಯ ಕೆಪಾಸಿಟಿ ಗಮನಿಸದೆ ಒಬ್ಬರೇ ಸಾಲಗಾರರಿಗೆ ಪದೇ ಪದೇ ಸಾಲ ಕೊಡುತ್ತಿರುವುದು ಏಕೆ?
ಸಾಲಗಾರರಿಗೆ ಸಾಲ ಕೊಡುವ ಮೊದಲು ಆಧಾರ್ KYC ಮಾಡಿಸುತ್ತಿಲ್ಲ ಏಕೆ ? ಇದನ್ನು ಮಾಡಿಸಿದ್ದರೆ ಒಬ್ಬರೇ ಸಾಲಗಾರರಿಗೆ ಪದೇ ಪದೇ ಸಾಲ ಕೊಡುವುದು ತಪ್ಪುತ್ತಿತ್ತು ಎಂದು ಸಿಎಂ ಸಿದ್ದರಾಮಯ್ಯ ಕಿವಿ ಹಿಂಡಿದರು.