ಬೆಳಗಾವಿ ಕಾಂಗ್ರೆಸ್​ ಸಮಾವೇಶ; ನಾನು ಜಗ್ಗಲ್ಲ, ಬಗ್ಗಲ್ಲ: BJP-RSS ವಿರುದ್ಧ ಹರಿಹಾಯ್ದ CM ಸಿದ್ದರಾಮಯ್ಯ

dk - 2025-04-28T151154.979
Published on

ಬೆಳಗಾವಿ: ನಾವು BJP-RSS ಗೊಡ್ಡು ಬೆದರಿಕೆಗಳಿಗೆ ಜಗ್ಗಲ್ಲ-ಬಗ್ಗಲ್ಲ. ನಿಮ್ಮನ್ನೆಲ್ಲಾ ಸಾರ್ವಜನಿಕವಾಗಿ ಎದುರಿಸುವ ಶಕ್ತಿ ನನಗಿದೆ. ನಮ್ಮ ಕಾರ್ಯಕರ್ತರಿಗೂ ಇದೆ ಎಂದು ಸಿಎಂ ಸಿದ್ದರಾಮಯ್ಯ ಹರಿಹಾಯ್ದರು.

AICC ಆಯೋಜಿಸಿದ್ದ ಕೇಂದ್ರ ಸರ್ಕಾರದ ಬೆಲೆ ಏರಿಕೆ, ಜನ ವಿರೋಧಿ ನೀತಿ ಹಾಗೂ ದೇಶ ವಿರೋಧಿ ಆಡಳಿತ ವಿರೋಧಿ ಖಂಡನಾ ಸಮಾವೇಶದಲ್ಲಿ ಮಾತನಾಡಿದರು. ಬಿಜೆಪಿಯ ದೇಶ ವಿರೋಧಿ ಆಡಳಿತ, ಜನ ವಿರೋಧಿ ಕ್ರಮಗಳನ್ನು ಖಂಡಿಸಿ ಭಾಷಣ ಮಾಡುವ ವೇಳೆ ಮುಖ್ಯಮಂತ್ರಿಗಳ ಭಾಷಣಕ್ಕೆ ಅಡ್ಡಿ ಪಡಿಸಿದ ಬಿಜೆಪಿಗರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಿಎಂ ಬಿಜೆಪಿ-RSSಗೆ ನೇರವಾಗಿ ಸವಾಲೆಸೆದು ಸೆಡ್ಡು ಹೊಡೆದರು.

ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಾ, ಭಾರತೀಯರ ಬದುಕನ್ನು ಬೆಲೆ ಏರಿಕೆಯಲ್ಲಿ ಬೇಯಿಸುತ್ತಾ, ಭಾರತೀಯ ಸಮಾಜವನ್ನು ಛಿದ್ರಗೊಳಿಸುತ್ತಾ, ಬಿರುಕು ಮೂಡಿಸುತ್ತಾ ಜನದ್ರೋಹಿಯಾಗಿ ವರ್ತಿಸುತ್ತಿರುವುದು ಬಿಟ್ಟರೆ ಬೇರೆ ಏನು ಮಾಡಿದ್ದೀರಿ ತೋರಿಸಿ ಜನರಿಗೆ ಎಂದು ಸವಾಲು ಹಾಕಿದರು.

ಭಾರತೀಯರು ಬ್ರಿಟೀಷರ ವಿರುದ್ಧ ಪ್ರಾಣತ್ಯಾಗ ಮಾಡಿ ಹೋರಾಡುತ್ತಿದ್ದಾಗ ನೀವು ಸಂಘ ಪರಿವಾರದವರು ಏನು ಕಡೆದು ಕಟ್ಟೆ ಹಾಕ್ತಿದ್ರಿ ? ಸ್ವಾತಂತ್ರ್ಯ. ಹೋರಾಟಕ್ಕೆ ಏಕೆ ಬರಲಿಲ್ಲ ? ಏನ್ ಮಾಡ್ತಾ ಕೂತಿದ್ರಿ ಆಗ ಎಂದು ಪ್ರಶ್ನಿಸಿದರು.

ಮೊನ್ನೆ ಕಾಶ್ಮೀರದಲ್ಲಿ ಅಮಾಯಕ ಭಾರತೀಯರನ್ನು, ಕರ್ನಾಟಕದ ಮೂವರು ಅಮಾಯಕರನ್ನು ರಾಜಾರೋಷವಾಗಿ ಗನ್ ಗಳ ಸಮೇತ ಬಂದು ಅಮಾನುಷವಾಗಿ ಹತ್ಯೆ ಮಾಡಿ ಹೋದರಲ್ಲಾ ಇದು ಕೇಂದ್ರ ಸರ್ಕಾರದ ಭದ್ರತಾ ಲೋಪ ಅಲ್ಲವಾ ? ಭಾರತೀಯರಿಗೆ ರಕ್ಷಣೆ ಕೊಡುವುದರಲ್ಲಿ ವಿಫಲ ಆಗಿರುವುದನ್ನು ನಾವು ಭಾರತೀಯರು ಪ್ರಶ್ನಿಸಬಾರದಾ ? ಪ್ರಶ್ನಿಸಿದರೆ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸ್ತೀರಾ ಎಂದು ಪ್ರಶ್ನಿಸಿದರು.

ಭಾರತಕ್ಕೆ ಸ್ವಾತಂತ್ರ್ಯ ಬಂದು 52 ವರ್ಷಗಳ ಕಾಲ RSS ಕಚೇರಿ ಮೇಲೆ ಭಾರತದ ಬಾವುಟ ಹಾರಿಸಲೇ ಇಲ್ಲ ನೀವು. ಇದಕ್ಕೂ ನಾಚಿಕೆ ಆಗುವುದಿಲ್ಲವೇ ನಿಮಗೆ ಎಂದು ಕಿಡಿಕಾರಿದರು.

ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಆಧುನಿಕ ಭಾರತ ನಿರ್ಮಾಣದವರೆಗೂ ಬಿಜೆಪಿ, ಸಂಘ ಪರಿವಾರದ ಕೊಡುಗೆ ಏನಿದೆ ? ನಾಚಿಕೆ ಇಲ್ಲದೆ ದೇಶಭಕ್ತಿ ಬಗ್ಗೆ ಮಾತಾಡ್ತೀರಾ. ಭಾರತೀಯ ಸಮಾಜವನ್ನು ಬಿರುಕು ಮೂಡಿಸಿದ್ದು ಬಿಟ್ಟರೆ ಇಷ್ಟು ವರ್ಷಗಳ ನಿಮ್ಮ ಕೊಡುಗೆ ಭಾರತಕ್ಕೆ ಏನು ಕೊಟ್ಟಿದ್ದೀರಿ ಎಂದು ದೇಶದ ಜನಕ್ಕೆ ವಿವರಿಸಿ ಎಂದು ಸವಾಲು ಹಾಕಿದರು.

ಭಾರತದ ಸ್ವಾತಂತ್ರ್ಯಕ್ಕೆ ಪ್ರಾಣ ತ್ಯಾಗ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ಹೋರಾಟ ಹೊಸದಲ್ಲ. ಬ್ರಿಟೀಷರನ್ನೇ ಒದ್ದೋಡಿಸಿದ ನಮಗೆ ನೀವು ಬಿಜೆಪಿ-RSS ನ್ನೂ ಎದುರಿಸಿ ನಿಲ್ಲುವ ಶಕ್ತಿ ಇದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net