

Leave India : ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕ ದಾಳಿ ಬೆನ್ನಲ್ಲೇ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಗಳನ್ನು ಭಾರತ ಸರ್ಕಾರ ಕೈಗೊಂಡಿದ್ದು, ಇದೀಗ ಎರಡು ದೇಶಗಳ ನಡುವೆ ಯುದ್ಧದ ಕಾರ್ಮೋಡ ಕವಿದಿದೆ.ಅಲ್ಲದೆ, ಕೇಂದ್ರ ಕೈಗೊಂಡಿರುವ ಕ್ರಮಗಳಲ್ಲಿ ಭಾರತದಲ್ಲಿರುವ ಪಾಕಿಸ್ತಾನ ಪ್ರಜೆಗಳು 48 ಗಂಟೆಯೊಳಗೆ ದೇಶವನ್ನು ತೊರೆಯಬೇಕು ಎಂದು ಗಡುವು ವಿಧಿಸಿದೆ. ಅದರಂತೆ ಇದೇ ಏ.27ಕ್ಕೆಗಡುವು ಮುಗಿದಿದೆ. ಮುಂದಿನ ಪ್ರಶ್ನೆ ಎಂದರೆ, ಇನ್ನೂ ಭಾರತ ತೊರೆಯದ ಹಲವು ಪಾಕಿಸ್ತಾನ ಪ್ರಜೆಗಳು ದೇಶದಲ್ಲೇ ಇದ್ದು, ಇವರು ಒಂದು ವೇಳೆ ಭಾರತ ತೊರೆಯದಿದ್ದರೆ ಏನಾಗುತ್ತೆ? ಸರ್ಕಾರದ ಮುಂದಿನ ಕ್ರಮ ಏನು? ಎಂಬುದು ತಿಳಿಯೋಣ.
ಸಾರ್ಕ್ ವೀಸಾ ಹೊಂದಿರುವವರು ಭಾರತದಿಂದ ನಿರ್ಗಮಿಸಲು ಏ.27 ಕೊನೆಯ ದಿನಾಂಕವಾಗಿತ್ತು. ವೈದ್ಯಕೀಯ ವೀಸಾ ಹೊಂದಿರುವವರಿಗೆ ಏ.29 ಕೊನೆ ದಿನವವಾಗಿದೆ.
ಅಲ್ಪಾವಧಿಯ ವೀಸಾ ಹೊಂದಿರುವ ಪಾಕಿಸ್ತಾನಿ ಪ್ರಜೆಗಳು ಭಾರತವನ್ನು ತೊರೆಯಲು ವಿಧಿಸಿದ್ದ ಗಡುವು ಮುಗಿದಿದೆ ಮತ್ತು ಸರ್ಕಾರದ ಆದೇಶಗಳ ಹೊರತಾಗಿಯೂ ತಮ್ಮ ವೀಸಾ ಅವಧಿ ಮುಗಿದ ನಂತರವೂ ದೇಶದಲ್ಲಿಯೇ ಉಳಿದುಕೊಳ್ಳುವುದರಿಂದ ಕಾನೂನು ಪರಿಣಾಮಗಳು ಎದುರಿಸಬೇಕಾಗುತ್ತೆ.
ಸರ್ಕಾರ ನಿಗದಿಪಡಿಸಿದ ಗಡುವಿನೊಳಗೆ ಭಾರತವನ್ನು ತೊರೆಯಲು ವಿಫಲರಾದ ಯಾವುದೇ ಪಾಕಿಸ್ತಾನಿ ವ್ಯಕ್ತಿಯನ್ನು ಬಂಧಿಸಲಾಗುತ್ತದೆ. ವಿಚಾರಣೆಗೆ ಒಳಪಡಿಸಲಾಗುತ್ತದೆ ಮತ್ತು ವಲಸೆ ಮತ್ತು ವಿದೇಶಿಯರ ಕಾಯ್ದೆ 2025ರ ಪ್ರಕಾರ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಗರಿಷ್ಠ 3 ಲಕ್ಷ ರೂ.ದಂಡ ಅಥವಾ ಎರಡನ್ನೂ ವಿಧಿಸಬಹುದು.
ಅಲ್ಪಾವಧಿಯ ವೀಸಾ ಹೊಂದಿರುವವರಿಗೆ ಭಾನುವಾರ ಗಡುವು ಮುಗಿದ ನಂತರ ಕಳೆದ ಮೂರು ದಿನಗಳಲ್ಲಿ ಒಟ್ಟು 537 ಪಾಕಿಸ್ತಾನಿ ಪ್ರಜೆಗಳು ಅಟ್ಟಾರಿ ಗಡಿಯ ಮೂಲಕ ಭಾರತವನ್ನು ತೊರೆದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಮೂರು ದಿನಗಳಲ್ಲಿ 850 ಭಾರತೀಯ ಪ್ರಜೆಗಳು ಭಾರತಕ್ಕೆ ಮರಳಿದ್ದಾರೆ ಎಂದು ಅಟ್ಟಾರಿ ಗಡಿಯಲ್ಲಿರುವ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಭಾನುವಾರ ಒಂದೇ ದಿನ 237 ಪಾಕಿಸ್ತಾನಿ ಪ್ರಜೆಗಳು ತಮ್ಮ ದೇಶಕ್ಕೆ ಮರಳಿದ್ದರೆ, 116 ಭಾರತೀಯ ಪ್ರಜೆಗಳು ವಾಪಸ್ ಬಂದಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.(ಏಜೆನ್ಸೀಸ್)