ಮುಡಾದಲ್ಲಿ ಸಿಕ್ಕಿಬಿದ್ದ ಸಿಎಂ ಸಿದ್ದರಾಮಯ್ಯ: ಛಲವಾದಿ ಅಣಕ

IMG-20241001-WA0030
Published on

ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯನವರು ಸಿಕ್ಕಿಬಿದ್ದಿದ್ದಾರೆ. ಜಗ್ಗೋಲ್ಲ; ಬಗ್ಗೋಲ್ಲ; ಏನೇ ಬಂದ್ರೂ ಎದುರಿಸ್ತೀನಿ ಎಂದವರು ನಿನ್ನೆ ಕತ್ತಲಾದ ಮೇಲೆ ಜಗ್ಗಿದ್ದಾರೆ, ಬಗ್ಗಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅಣಕವಾಡಿದರು.

ಬಿಜೆಪಿ ರಾಜ್ಯ ಕಚೇರಿಯಲ್ಲಿ  ಮಾಧ್ಯಮ ಪ್ರತಿನಿಧಿಗಳ ಜತೆ ಮಂಗಳವಾರ ಮಾತನಾಡಿದ ಅವರು, ಮುಡಾಗೆ 14 ನಿವೇಶನಗಳ ವಾಪಸಾತಿಯಿಂದ ಸಿಎಂ ಕಪಟತನ ಎಂಥದ್ದೆಂದು ಅರ್ಥವಾಗುತ್ತದೆ ಎಂದು ಕುಟುಕಿದರು.

ಹಳ್ಳಿಕಡೆ ‘ನೂರು ಬಾರಿ ಕದ್ದೋನು ಒಂದು ಸಾರಿಯಾದ್ರೂ ಸಿಗಲೇಬೇಕು’ ಎಂಬ ಗಾದೆ ಇದೆ. ಹಾಗೆ ಸಿದ್ದರಾಮಯ್ಯನವರು ಸಾಚಾ ಅಲ್ಲ. ನೂರಾರು ಬಾರಿ ಕದ್ದವರು ಒಂದು ಸಾರಿ ಸಿಕ್ಕಿ ಹಾಕಿಕೊಳ್ತಾರಲ್ವ? ಒಂದು ಸಾರಿ ಸಿಕ್ಕಿದರೂ ನೂರು ಬಾರಿ ಮಾಡಿದ ಹಾಗೇ ಎಂದು ವಿಶ್ಲೇಷಿಸಿದರು.

ಸಂವಿಧಾನಕ್ಕೆ ನೈಜ ಗೌರವ

ಸಿಎಂ ಜಗ್ಗಿದ ಮೇಲೆ ಬಾಬಾಸಾಹೇಬ ಅಂಬೇಡ್ಕರ್ ಅವರು ಬರೆದ ಸಂವಿಧಾನಕ್ಕೆ ನಿಜವಾಗಿಯೂ ಗೌರವ ಸಿಕ್ಕಿದೆ. ಯಾರೂ ಕೂಡ ಈ ರೀತಿ ಉದ್ಧಟತನ ಪ್ರದರ್ಶನ ಮಾಡಬಾರದು. ಕಳೆದ ಬಾರಿ ಅವರ ಅಧಿಕಾರಾವಧಿಯಲ್ಲಿ ಹುಬ್ಲೋಟ್ ವಾಚ್ ವಿಚಾರ ಬಂದಿತ್ತು. ಅದು ದುಡ್ಡು ಕೊಟ್ಟು ಕೊಂಡದ್ದೆಂದು ಮೊದಲು ಹೇಳಿದ್ದರು.

ಸ್ವಲ್ಪ ದಿನದ ಬಳಿಕ ಸ್ನೇಹಿತರಿಂದ ಉಡುಗೊರೆ ಎಂದಿದ್ದರು. ನಂತರ ಕಳವು ಮಾಲೆಂದು ಗೊತ್ತಾಗಿತ್ತು. ಇದರಿಂದ ಕಷ್ಟ ಅನುಭವಿಸಬೇಕಾಗಬಹುದೆಂದು ಅದನ್ನು ಸರೆಂಡರ್ ಮಾಡಿದ್ದರು ಎಂದು ವಿವರಿಸಿದರು.

ಕದ್ದ ಮಾಲನ್ನು ವಿಧಾನಸೌಧದಲ್ಲಿ ಸರೆಂಡರ್ ಮಾಡಿದ್ದು ಸರಿಯೇ? ಪೊಲೀಸರಿಗೆ ಕೊಡಬೇಕಿತ್ತಲ್ಲವೇ? ಎಂದು ಕೇಳಿದರು. ಎಸ್‍ಇಪಿ, ಎಸ್‍ಟಿಪಿ ಹಣ ಅನ್ಯ ಉದ್ದೇಶಕ್ಕೆ ಬಳಕೆ ಸಮರ್ಥಿಸಿಕೊಂಡಿದ್ದರು.

ಪ್ರತಿಭಟನೆ ನಡೆದು ಮುಜುಗರ ಅನುಭವಿಸಬೇಕಾದ ಸಂದರ್ಭದಲ್ಲಿ, ಪ್ರಜಾಪ್ರಭುತ್ವ ದಿನದಂದು ನಾನೊಂದು ತಪ್ಪು ಮಾಡಿದೆ. ಅನ್ಯ ಉದ್ದೇಶಕ್ಕೆ ಪರಿಶಿಷ್ಟ ಸಮುದಾಯದ ಹಣ ಬಳಸಬಾರದಿತ್ತು ಎಂದಿದ್ದರು ಎಂದು ಗಮನ ಸೆಳೆದರು. ಅಲ್ಲಿಗೆ ಅವೆರಡರಿಂದ ತಪ್ಪಿಸಿಕೊಂಡರು ಎಂದು ಛಲವಾದಿ ಹೇಳಿದರು.

ವಾಲ್ಮೀಕಿ ನಿಗಮದ್ದು 187 ಕೋಟಿಯ ಹಗರಣವಲ್ಲ; 87 ಕೋಟಿಯ ಹಗರಣ ಎಂದು ಸದನದಲ್ಲೇ ಒಪ್ಪಿಕೊಂಡರು. ಈಗ ಮುಡಾದ್ದು ತಮ್ಮ ನಿವೇಶನಗಳಿಗೆ 62 ಕೋಟಿ ಬರಬೇಕು; ಕೊಡ್ತೀರಾ ಎಂದು ಪತ್ರಕರ್ತರನ್ನು ಪ್ರಶ್ನಿಸಿದ ಸಿದ್ದರಾಮಯ್ಯನವರ ಇವತ್ತಿನ ಅವರ ಪರಿಸ್ಥಿತಿ ನೋಡಿ ಎಂದು ಛಲವಾದಿ ನಾರಾಯಣಸ್ವಾಮಿ ಛೇಡಿಸಿದರು. ಪಕ್ಷದ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net