

ಬೆಂಗಳೂರು: ಕಾವೇರಿ ನೀರಿನ ವಿಚಾರದಲ್ಲಿ ಬಿಜೆಪಿಗೆ ಪ್ರತಿಭಟಿಸುವ ನೈತಿಕತೆಯೇ ಇಲ್ಲ. ಕೇಂದ್ರದ ಕೈಯ್ಯಲ್ಲೇ ಈ ಸಮಸ್ಯೆಗೆ ಪರಿಹಾರವಿದೆ. ಅತ್ತ ಗಮನಸೆಳೆಯುವ ಬದಲು ತಮಿಳುನಾಡಿಗೆ ನೀರು ಹರಿಸಿದ್ದನ್ನು ಮುಂದಿಟ್ಟುಕೊಂಡು ಹೋರಾಟ ಮಾಡಲು ಹೊರಟಿದೆ ಎಂದು ಪ್ರತಿಪಕ್ಷ ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹರಿಹಾಯ್ದರು.
ರಾಜ್ಯದ ಕಾವೇರಿ ಅಚ್ಚುಕಟ್ಟು ಪ್ರದೇಶಕ್ಕೆ ನೀರಿನ ಕೊರತೆಯಿದೆ. ಆದರೂ ತಮಿಳುನಾಡಿಗೆ ನೀರು ಬಿಟ್ಟ ಸರ್ಕಾರದ ನಿರ್ಧಾರ ಖಂಡಿಸಿ, ಮಂಡ್ಯದಲ್ಲಿ ಸೋಮವಾರ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ನಮಗೆ ನೀರಿಲ್ಲವೆಂದು ತಿಳಿಸಿ, ನಂತರ ನೀರು ಬಿಟ್ಟು, ರಾಜ್ಯದ ರೈತರ ಹಿತ ಬಲಿಕೊಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಈ ಹೋರಾಟದ ಕುರಿತು ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಭಾನುವಾರ ಪ್ರತಿಕ್ರಿಯಿಸಿದ ಸಿಎಂ, ಈಗಾಗಲೇ ಸರ್ವಪಕ್ಷಗಳ ಸಭೆ ಕರೆಯಲು ತೀರ್ಮಾನಿಸಿರುವೆ. ರಾಜ್ಯದ ರೈತರ ಸಂಕಷ್ಟ, ಮುಂದಿನ ನಡೆ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು ಈ ಸಭೆ ಕರೆದ ಉದ್ದೇಶ. ಸರ್ಕಾರದ ನಿರ್ಧಾರ ತಿಳಿಸಿದ ಮೇಲೂ ಬಿಜೆಪಿ ಪ್ರತಿಭಟನೆ ನಡೆಸುವ ಔಚಿತ್ಯವೇನು ? ಎಂದು ಸಿದ್ದರಾಮಯ್ಯ ಕೇಳಿದರು.