ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ, ಕೇಂದ್ರ ಗೃಹಸಚಿವ ಅಮಿತ್ ಷಾ ಮಹತ್ವದ ಭೇಟಿ!

Siddaramaiah Shah F
Published on

ನವದೆಹಲಿ: ಅನ್ನಭಾಗ್ಯದ ವಿಚಾರವಾಗಿ ಕಾಂಗ್ರೆಸ್-ಬಿಜೆಪಿ ಮಧ್ಯೆ ಸಂಘರ್ಷ ನಡೆಯುತ್ತಿರುವ ನಡುವೆಯೇ ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ಗೃಹಸಚಿವ ಅಮಿತ್ ಷಾ ಭೇಟಿ ನಡೆದಿದೆ. ಈ ಮೂಲಕ ಇಬ್ಬರ ಭೇಟಿ ಕುತೂಹಲ ಕೆರಳಿಸಿದೆ.

ಇಂದು ದೆಹಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ಈ ಮೊದಲೇ ಹೇಳಿದಂತೆ ಜುಲೈ 1ರಂದೇ ಅನ್ನಭಾಗ್ಯ ಯೋಜನೆ ಜಾರಿಗೆ ಬರುವುದು ಅನುಮಾನ ಎಂದಿದ್ದರು. ಅಕ್ಕಿಯ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿರುವುದರಿಂದ ಯೋಜನೆ ಅನುಷ್ಠಾನ ವಿಳಂಬವಾಗುತ್ತಿದೆ ಎಂದಿದ್ದರು.

ಅಲ್ಲದೆ, ಈ ವಿಚಾರವಾಗಿ ಅಮಿತ್ ಷಾ ಬಳಿ ಮಾತನಾಡುವುದಾಗಿಯೂ ಅವರು ಹೇಳಿದ್ದರು. ಅದರಂತೆಯೇ ಈಗ ಸಿದ್ದರಾಮಯ್ಯ ಮತ್ತು ಅಮಿತ್ ಷಾ ಭೇಟಿ ಮಾಡಿದ್ದು, ಮಹತ್ವದ ಮಾತುಕತೆ ನಡೆದಿದೆ. ಕೇಂದ್ರ ಸರ್ಕಾರದ ನೀತಿಯಿಂದ ಬಡವರ ಊಟಕ್ಕೆ ತೊಂದರೆಯಾಗಿದೆ ಎಂದು ಕೇಂದ್ರ ಸಚಿವರಿಗೆ ಈ ವೇಳೆ ಸಿಎಂ ಮನವರಿಕೆ ಮಾಡಿದ್ದಾರೆ. ಅಲ್ಲದೆ ಅಕ್ಕಿ ವಿಚಾರವಾಗಿ ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ಜತೆ ಚರ್ಚಿಸುವುದಾಗಿ ಷಾ ಭರವಸೆ ನೀಡಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.

ಕೇಂದ್ರದ ಇತ್ತೀಚಿನ ನೀತಿ ಆಹಾರ ಭದ್ರತಾ ಕಾಯ್ದೆಗೆ ವಿರುದ್ಧವಾಗಿದೆ. ಇದು ನೇರವಾಗಿ ಬಡವರ ಎರಡು ಹೊತ್ತಿನ ಊಟಕ್ಕೂ ತೊಂದರೆ ಕೊಡುತ್ತದೆ. ಆದ್ದರಿಂದ ರಾಜ್ಯಗಳಿಗೆ ಆಹಾರ ಧಾನ್ಯಗಳನ್ನು ಕೊಡದಿರುವ ಧೋರಣೆ ಬದಲಾದರೆ ಒಳ್ಳೆಯದು ಎನ್ನುವ ಅಭಿಪ್ರಾಯವನ್ನು ಷಾ ಮುಂದೆ ಸಿಎಂ ವ್ಯಕ್ತಪಡಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net