ಸಿಎಂ ಕ್ಷಮೆಯಾಚಿಸಲಿ: ವಿಜಯೇಂದ್ರ ಆಗ್ರಹ | Dharmasthala issue

Vijayendra visit
Published on

ಬೆಂಗಳೂರು: ಧರ್ಮಸ್ಥಳ ಶ್ರೀ ಮಂಜುನಾಥೇಶ್ವರನ ಕೋಟ್ಯಂತರ ಭಕ್ತರ ಭಾವನೆಗಳಿಗೆ ಧಕ್ಕೆ ತಂದ ಸಿಎಂ ಸಿದ್ದರಾಮಯ್ಯ ನಾಡಿನ ಜನರ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.

ಬೆಂಗಳೂರಿನ ಜೆ.ಪಿ.ನಗರದ ರಾಗಿಗುಡ್ಡ ವಾರ್ಡ್‌ನ ಪಕ್ಷದ ಬೂತ್ ಅಧ್ಯಕ್ಷ ಬಿ.ರವಿ ಮನೆಗೆ ಗುರುವಾರ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ವಿಚಾರದಲ್ಲಿ ಎಸ್‌ಐಟಿ ರಚಿಸಲು ಒತ್ತಡ ತಂದವರು ಯಾರು ? ಎಂದು ಕೇಳಿದರು.

ಯಾರದ್ದೋ ಮಾತು ಕೇಳಿ ದೊಡ್ಡ ನಿರ್ಧಾರ ತೆಗೆದುಕೊಂಡುಬಿಟ್ಟರು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಪ್ರಮಾಣದ ಅಪಪ್ರಚಾರ ನಡೆಯಿತು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೇ ರಾಜ್ಯದ ಜನರಿಗೆ ಉತ್ತರಿಸಬೇಕು ಎಂದು ಒತ್ತಾಯಿಸಿದರು.

ದುರುದ್ದೇಶ ಬಯಲು ಆಶಯ

ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ರಚಿಸಿದ್ದನ್ನು ಬಿಜೆಪಿ ಸ್ವಾಗತಿಸಿದ್ದು ನಿಜ. ದುರುದ್ದೇಶದ ದೂರಿನ ವಿಚಾರ ಬಯಲಿಗೆ ಬರಲೆಂಬ ಆಶಯ ಹೊಂದಿತ್ತು. ಎಸ್‌ಐಟಿ ರಚಿಸಿದ ಸರ್ಕಾರ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯಮಟ್ಟದಲ್ಲಿ ಅಪಪ್ರಚಾರ ಬಾಯಿ ಮುಚ್ಚಿಕೊಂಡು ಕುಳಿತಿತ್ತು ಎಂದು ವಾಗ್ದಾಳಿ ಮಾಡಿದರು.

ಬುರುಡೆ ಗ್ಯಾಂಗ್ ಪೈಸಾ ವಸೂಲಾತಿಗೆ ಧರ್ಮಸ್ಥಳದ ವಿಷಯದಲ್ಲಿ ಎಸ್‌ಐಟಿ ರಚಿಸಲು ಅರ್ಜಿ ಹಾಕಿದ್ದಾಗಿ ನ್ಯಾಯಾಲಯಕ್ಕೆ ಅನಿಸಿತ್ತು. ಸಾರ್ವಜನಿಕ ಬದಲು ವೈಯಕ್ತಿಕ ಹಿತಾಸಕ್ತಿಯಿದೆ ಎಂದು ಸುಪ್ರೀಂ ಕೋರ್ಟ್‌ಗೆ ಮೇ ತಿಂಗಳಲ್ಲೇ ಅನಿಸಿತ್ತಾದರೆ ಸಿಎಂ ಅನಿಸಲಿಲ್ಲವೇಕೆ ? ಎಂದು ಪ್ರಶ್ನಿಸಿದರು.

ಯಾವನೋ ಹಾದೀಲಿ ಬೀದೀಲಿ ಹೋದವನ ದೂರು ಪರಿಗಣಿಸಿದರು. ಕೋಟ್ಯಂತರ ಭಕ್ತರ ಸಾಧಕ-ಬಾಧಕಗಳನ್ನು ಕಡೆಗಣಿಸಿದರು. ಎಸ್‌ಐಟಿ ರಚಿಸುವುದಿಲ್ಲ ಎಂದು 24 ತಾಸಿನಲ್ಲಿ ಉಲ್ಟಾ ಹೊಡೆದು ಎಸ್‌ಐಟಿ ರಚಿಸಿದರು ಎಂದು ಬಿ.ವೈ.ವಿಜಯೇಂದ್ರ ಕಿಡಿಕಾರಿದರು.

ಗೊಂದಲ ಸೃಷ್ಟಿ

ಕಾಂಗ್ರೆಸ್ ಸರ್ಕಾರ ಯಾವುದೇ ಆಯೋಗಗಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಈಗ ಮತ್ತೆ ಜಾತಿ ಜನಗಣತಿ ಹೆಸರಿನಲ್ಲಿ ಕೋಟ್ಯಂತರ ರೂ. ವೆಚ್ಚ ಮಾಡಿ ಗೊಂದಲ ಸೃಷ್ಟಿಗೆ ಹೊರಟಿದೆ ಕಾಂತರಾಜು ಆಯೋಗಕ್ಕೆ 150 ಕೋಟಿ, 160 ಕೋಟಿ ರೂ ಖರ್ಚು ಮಾಡಿ, ವರದಿಯನ್ನು ಕಸದ ಬುಟ್ಟಿಗೆ ಹಾಕಿದ್ದಾಗಿದೆ ಎಂದು ತಿವಿದರು.

ಪರಿಶಿಷ್ಟ ಜಾತಿ ಮೀಸಲು ವರ್ಗೀಕರಣಕ್ಕೆ ಸಂಬಂಧಿಸಿದ ನ್ಯಾ.ಎಚ್.ಎನ್.ನಾಗಮೋಹನ್‌ದಾಸ್ ಆಯೋಗದ ಬಗ್ಗೆ ಯಾವ ನಿಲುವು ತಳೆಯಿತು ಎಂಬುದು ತಾಜಾ ನಿದರ್ಶನ ಜನರ ಮುಂದಿದೆ. ಕಾಂತರಾಜು ವರದಿ ಕೈಬಿಟ್ಟವರು, ಈಗ 500- 600 ಕೋಟಿ ರೂ. ಖರ್ಚು ಮಾಡಿ ಗೊಂದಲ ಸೃಷ್ಟಿಸಲು ಆಸಕ್ತಿವಹಿಸಿದ್ದು, ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ ಎಂದು ಬಿವೈ.ವಿಜಯೇಂದ್ರ ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net