ಬಜೆಟ್ ನಂತರ ರಾಜ್ಯದ ಜನರಿಗೆ ಸಿಎಂ ಶಾಕ್ : ಆರ್.ಅಶೋಕ್ ಆಕ್ರೋಶ | Stop tax wastage to help farmers

LOP R Ashok
Published on

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ರಹಸ್ಯ ಕಾರ್ಯಸೂಚಿಯಿದೆ ಎಂದು ಸದನದಲ್ಲೇ ಹೇಳಿದ್ದೆವು. ಹಾಲು, ವಿದ್ಯುತ್ ದರ ಹೆಚ್ಚಳದ ಮೂಲಕ ರಾಜ್ಯದ ಜನರಿಗೆ ಮೋಸ ಮಾಡಿರುವುದು ಸಾಬೀತಾಗಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸೌಧದ ತಮ್ಮ ಕಚೇರಿಯಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯುಗಾದಿ ಹಬ್ಬಕ್ಕೆ ಮುನ್ನಾ ಎರಡು ದರ ಏರಿಕೆಗಳ ಕೊಡುಗೆ ನೀಡಿದ್ದಾರೆ. ಮುಂಬರುವ ಹಬ್ಬಗಳಿಗೆ ಮೂರ‌್ನಾಲ್ಕು ದರಗಳನ್ನು ಏರಿಸಲಿದ್ದು, ಮುಂದಿದೆ ಮಾರಿ ಹಬ್ಬ ಎಂಬ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮೂರನೇ ಬಾರಿ ಹಾಲಿನ ದರ ಏರಿಕೆಯಾಗಿದೆ. ಈ ಹಿಂದೆ ಎರಡು ಬಾರಿ ರೈತರ ಹೆಸರಿನಲ್ಲೇ ಬೆಲೆ ಏರಿಸಿದ್ದರೂ ಕೊಟ್ಟಿಲ್ಲ. ಇದೀಗ ಹೆಚ್ಚಿಸುವುದು ಸೇರಿ 20 ತಿಂಗಳಲ್ಲಿ ಒಟ್ಟು ಒಂಭತ್ತು ರೂ.ಗೆ ಹೆಚ್ಚಿಸಲಾಗಿದೆ.

ಹಾಲಿನ ಸಬ್ಸಿಡಿ ಬಾಕಿ 600 ಕೋಟಿ ರೂ. ಪಾವತಿಸಲು ಒತ್ತಾಯಿಸಿದರೆ ಹಿಂದಿನ ಬಿಜೆಪಿ ಸರ್ಕಾರದ ಕಡೆಗೆ ಬೊಟ್ಟು ಮಾಡುತ್ತಾರೆ 2018ರಲ್ಲಿ ಸಿದ್ದರಾಮಯ್ಯ ಅಧಿಕಾರ ಅವಧಿ ಮುಗಿಸಿದಾಗ ಇದ್ದ ಬಾಕಿ ಎಷ್ಟೆಂಬುದು ರಾಜ್ಯದ ಜನರ ಮುಂದಿಡಲಿ ಎಂದು ಸವಾಲೆಸೆದರು.

ಪೋಲು ತಡೆದರೆ ನೆರವು

ಮಂತ್ರಿ ಮಂಡಲದ ಸದಸ್ಯರ ಹೊರತಾಗಿ 109 ಹಾಲಿ-ಮಾಜಿ ಶಾಸಕರನ್ನು ವಿವಿಧ ಹುದ್ದೆಗಳಿಗೆ ನೇಮಿಸಿ ಸಚಿವ ಸಂಪುಟ ದರ್ಜೆ ಸ್ಥಾನ ಮಾಡಲಾಗಿದೆ. ಹಾಗೆಯೇ ಗ್ಯಾರಂಟಿ ಅನುಷ್ಠಾನ ಸಮಿತಿಗೆ ಕಾಂಗ್ರೆಸ್ ಕಾರ್ಯಕರ್ತರನ್ನು ನೇಮಿಸಿ ನೂರಾರು ಕೋಟಿ ರೂ. ತೆರಿಗೆ ವ್ಯರ್ಥ ಪೋಲು ತಡೆದರೆ ರೈತರಿಗೆ ನೆರವಾಗಲು ಸಾಧ್ಯವಿದೆ ಎಂದರು.

ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ತೆರಿಗೆ, ಶುಲ್ಕಗಳ ಹೆಚ್ಚಳ ಪ್ರಸ್ತಾಪಿಸಲಿಲ್ಲ. ಯಾವುದೆಲ್ಲ ಅಭಿವೃದ್ಧಿ ಕೆಲಸಗಳಿಗೆ ವಿನಿಯೋಗ, ಆರ್ಥಿಕ ಸಂಪನ್ಮೂಲ ಕ್ರೋಡೀಕರಣದ ಒಮ್ಮುಖ ಮಾಹಿತಿ ನೀಡಿ ಜನರಿಂದ ಶಹಬ್ಬಾಸ್ ಪಡೆಯಲು ಪ್ರಯತ್ನಿಸಿದ್ದಾರೆ.

ವಿದ್ಯುತ್ ದರ ಹೆಚ್ಚಳದಲ್ಲಿ ನಿವೃತ್ತ ಸಿಬ್ಬಂದಿಯ ಪಿಂಚಣಿ ಮತ್ತು ಗ್ರಾಚ್ಯುಟಿ ವೆಚ್ಚವೂ ಸೇರಿದ್ದು, ಈ ವೆಚ್ಚವನ್ನೂ ಭರಿಸಲಾಗದಷ್ಟು ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದ್ದನ್ನು ತೋರಿಸುತ್ತದೆ ಎಂದು ಟೀಕಿಸಿದರು.

ಬಿಜೆಪಿಯಿಂದ ಹೋರಾಟ

ದರ ಏರಿಕೆ ವಿರುದ್ಧ ಬಿಜೆಪಿ ರಾಜ್ಯದಾದ್ಯಂತ ಹೋರಾಟ ಮಾಡಲಿದೆ. ಯುಗಾದಿ ಹಬ್ಬದ ಕಳೆದ ನಂತರ ಇದರ ದಿನಾಂಕ ನಿಗದಿ ಮಾಡಲಾಗುವುದು. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲೇ ಪ್ರೋತ್ಸಾಹಧನ ಹೆಚ್ಚಳ ಕುರಿತು ಘೋಷಣೆ ಮಾಡಿದ್ದರೂ ಜಾರಿ ಮಾಡಿಲ್ಲ ಎಂದು ಟೀಕಿಸಿದರು.

ಬಿಜೆಪಿಯಲ್ಲಿ ನಾವೆಲ್ಲರೂ ಒಂದಾಗಿ ಹೋಗಬೇಕು ಎಂಬ ಅಭಿಪ್ರಾಯ ನನ್ನದು. ಪಕ್ಷದ ಹಿರಿಯರು ಕೈಗೊಂಡ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ಯಾರೂ ಕೂಡ ಪಕ್ಷದ ವಿರುದ್ಧವಾಗಿ ಮಾತಾಡಬಾರದು ಎಂದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಉಚ್ಚಾಟನೆಯಿಂದ ಪಕ್ಷಕ್ಕೆ ಹಾನಿ ನಿಜ. ಆದರೆ ಪಕ್ಷದ ಶಿಸ್ತು ಯಾರೂ ಮೀರಬಾರದು. ರಾಜಕೀಯ ಪಕ್ಷ ತೆಗೆದುಕೊಂಡ ನಿರ್ಧಾರದ ಬಗ್ಗೆ ಪಂಚಮಸಾಲಿ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿರುವುದು ಅಚ್ಚರಿಯಾಗಿದ್ದು, ಅವರು ತಮ್ಮ ನಿರ್ಧಾರವನ್ನು ಮರು ಪರಿಶೀಲಿಸಬೇಕು ಎಂದು ಆರ್.ಅಶೋಕ್ ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net