ಸಾರಿಗೆ ನೌಕರರ ಮುಷ್ಕರಕ್ಕೆ ಸಿಎಂ ಹೊಣೆ: ವಿಜಯೇಂದ್ರ | Severe hardship for people

B.Y.Vijayendra
Published on

ಬೆಂಗಳೂರು: ಸಾರಿಗೆ ನಿಗಮಗಳ ನೌಕರರ ಕನಿಷ್ಠ ಎರಡು ಬೇಡಿಕೆಗಳನ್ನು ಸಿಎಂ ಸಿದ್ದರಾಮಯ್ಯ ವಿಫಲರಾಗಿದ್ದಾರೆ. ಬಸ್ ಸಂಚಾರ ಸ್ಥಗಿತ ಮುಷ್ಕರ, ಜನರ ತಾಪತ್ರಯಗಳಿಗೆ ಸಿಎಂ ನೇರ ಹೊಣೆಗಾರರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಶಕ್ತಿ ಯೋಜನೆಯಿಂದ ಬಹಳಷ್ಟು ಪ್ರಮಾಣದಲ್ಲಿ ಬಸ್ ಗಳ ಸಂಚಾರ ಕಡಿತಗೊಳಿಸಿದ್ದರು. ಇದರಿಂದಾಗಿ ಗ್ರಾಮೀಣ ಪ್ರದೇಶದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಈಗ ಬಸ್ ಗಳ ಸಂಚಾರ ಸ್ಥಗಿತವಾಗಿ ಸಮಸ್ಯೆ ಮತ್ತಷ್ಟು ಉಲ್ಬಣಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.

ರಾಹುಲ್ ಗಾಂಧಿ ಹೋರಾಟಕ್ಕೆ ತೊಂದರೆಯಾಗಬಾರದು ಎಂದು ಸಾರಿಗೆ ನಿಗಮಗಳ ನೌಕರರ ಸಂಘಟನೆಗಳ ಮುಖಂಡರನ್ನು ಸಿಎಂ ಸಿದ್ದರಾಮಯ್ಯ ತರಾತುರಿಯಲ್ಲಿ ಕರೆದು ಮಾತುಕತೆ ನಡೆಸಿದರು. ಆರ್ಥಿಕ ಮುಗ್ಗಟ್ಟಿನಿಂದ ನೌಕರರ ಎರಡು ಬೇಡಿಕೆಗಳನ್ನು ಈಡೇರಿಸಲು ಕೂಡ ವಿಫಕರಾಗಿದ್ದಾರೆ ಎಂದು ಟೀಕಿಸಿದರು.

ಮತ್ತೆ ಮಾತುಕತೆಗೆ ಒತ್ತಾಯ

ಗ್ಯಾರಂಟಿಗಳಿಂದಾಗಿ ಸರ್ಕಾರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವುದು ಸ್ಪಷ್ಟವಾಗಿದೆ. ನೌಕರರ ಮನವೊಲಿಕೆ ಸಾಧ್ಯವಾಗದೆ ಜೈಚೆಲ್ಲಿದೆ. ಈಗ ಖಾಸಗಿ ಶಿಕ್ಷಣ ಸಂಸ್ಥೆಗಳ ಬಸ್ ಗಳನ್ನು ಪಡೆಯಲು ಮುಂದಾಗಿದೆ. ಇದು ಮತ್ತೊಂದು ರೀತಿಯ ತೊಂದರೆಗೆ ಕಾರಣವಾಗಲಿದೆ ಎಂದರು.

ಹೈಕೋರ್ಟ್ ಸೂಚನೆಯ ನಡುವೆಯೂ ನೌಕರರ ಸಂಘಟನೆಗಳು ಅನಿರ್ದಿಷ್ಟ ಚಳವಳಿಗೆ ಇಳಿದಿವೆ. ಸಿಎಂ ಸಿದ್ದರಾಮಯ್ಯ ಅವರು ಕೂಡಲೇ ಎಚ್ಚೆತ್ತು, ಸಂಘಟನೆಗಳ ಮುಖಂಡರನ್ನು ಕರೆದು ಮತ್ತೊಮ್ಮೆ ಮಾತುಕತೆ ನಡೆಸಬೇಕು ಎಂದು ಆಗ್ರಹಿಸಿದರು.

ನೌಕರರ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಿ ಜನರ ಬವಣೆ ನಿವಾರಿಸಬೇಕು. ಕೊನೆ ಗಳಿಗೆಯಲ್ಲಿ ಬೇರೆ ಪ್ರಯತ್ನಕ್ಕೆ ಕೈಹಾಕಿ, ಬಿಕ್ಕಟ್ಟು ಜಟಿಲವಾಗದಂತೆ ನೋಡಿಕೊಳ್ಳುವುದು ರಾಜ್ಯ ಸರ್ಕಾರದ ತುರ್ತು ಜವಾಬ್ದಾರಿಯಾಗಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net