

ಶ್ರೀನಿವಾಸಪುರ : ಮುಖ್ಯಮಂತ್ರಿಗಳ ಸ್ಥಾನದ ರೇಸ್‌ನಲ್ಲಿ ಹಲವರಿದ್ದು, ಆದರೆ, ನಾನಂತೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್ ಹೇಳಿದರು.
ಪಟ್ಟಣದ ಶಂಕರಮಠದ ಸಮೀಪ ನಿರ್ಮಾಣಗೊಂಡಿರುವ ಜಗದ್ಗುರು ಶ್ರೀ ಭಾರತಿ ತೀರ್ಥಸಭಾ ಭವನ ಉದ್ಘಾಟನಾ ಸಮಾರಂಭದಲ್ಲಿ ಬುಧವಾರ ಪಾಲ್ಗೊಂಡು ಮಾತನಾಡಿ, ಮುಖ್ಯಮಂತ್ರಿಗಳ ಸ್ಥಾನಕ್ಕೆ ತೆರೆ ಮರೆಯಲ್ಲಿ ಯಾರ‌್ಯಾರು ಕಸರತ್ತು ನಡೆಸುತ್ತಿದ್ದಾರೋ ಗೊತ್ತಿಲ್ಲ. ಶೃಂಗೇರಿ ಮಠದ ಜಗದ್ಗುರುಗಳು ಮುಖ್ಯಮಂತ್ರಿಯಾಗುತ್ತಿಯಾ ಎಂದು ನನಗೆ ಆಶೀರ್ವಾದ ನೀಡಿದ್ದು ನಿಜ, ಆದರೆ ನಾನಂತೂ ಮುಖ್ಯಮಂತ್ರಿ ಸ್ಥಾನದ ಸ್ಪರ್ಧಿ ಅಲ್ಲ ಎಂದರು.
ಯಾರು ಎಷ್ಟೇ ದೊಡ್ಡವರಾಗಲಿ, ಸಾರ್ವಜನಿಕ ಮತ್ತು ಸಮಾಜದ ಹಿತ ಬಂದಾಗ ನಿರ್ದಾಕ್ಷಿಣ್ಯವಾಗಿ, ನಿರ್ಭಯವಾಗಿ ಅವರನ್ನು ಎದುರಿಸುವ ಶಕ್ತಿ ಕೊಡಲಿ ಎಂದು ಶೃಂಗೇರಿ ಶಾರದಾಂಬೆಯನ್ನು ಬೇಡಿಕೊಳ್ಳುವೆ ಎಂದರು.
ನನ್ನ ಮಗನ ವಿವಾಹದ ಆಮಂತ್ರಣಕ್ಕೆಂದು ಜಗದ್ಗುರುಗಳನ್ನು ಕಾಣಲು ಶೃಂಗೇರಿಗೆ ಹೋದಾಗ ನೀವು ಒಂದಲ್ಲ ಒಂದು ದಿನ ಮುಖ್ಯಮಂತ್ರಿ ಆಗುತ್ತಿರಿ ಎಂದು ಆಶೀರ್ವಾದ ಮಾಡಿದ್ದರು. ಅವರ ಮಾತನ್ನು ಗೌರವಿಸಿದ್ದೇನೆ. ಆದರೆ ನನ್ನ ನೀರಾವರಿ ಯೋಜನೆ ಅಪೂರ್ಣಗೊಂಡಿದ್ದು, ಬರಗಾಲ ಇರಬಾರದೆಂದು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಪ್ರತಿ ಗ್ರಾಮಗಳಿಗೆ ನೀರಾವರಿ ಯೋಜನೆಯನ್ನು ವಿಸ್ತರಿಸಬೇಕೆಂದು ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದೇನೆ ಎಂದರು.
ಭಾರತಿ ತೀರ್ಥ ಸಭಾಭವನವನ್ನು ಲೋಕಾರ್ಪಣೆ ಮಾಡಿದ ಶ್ರೀಶಾರದಾ ಪೀಠ ಶೃಂಗೇರಿಯ ಆಡಳಿತಾಧಿಕಾರಿ ಡಾ. ವಿ.ಆರ್. ಗೌರಿಶಂಕರ್ ಮಾತನಾಡಿ, ಶ್ರೀನಿವಾಸಪುರದಲ್ಲಿ ನಮ್ಮ ಮಠದ ಶಾಖೆಯಿಂದ ನೀಡಿದ 4 ಕೋಟಿ ರೂ.ಗಳ ಜತೆಗೆ ದಾನಿಗಳ ಸಹಾಯದಿಂದ ಸ್ಥಳೀಯ ಶಾಖಾ ಮಠದವರು ಭವ್ಯ ಸಭಾ ಭವನ ನಿರ್ಮಾಣ ಮಾಡಿದ್ದಾರೆ. ಇಲ್ಲಿನ ಮಠದವರು ಸನಾತನ ಕಾಲದ ಧರ್ಮ ಉಳಿಸಿಕೊಂಡು ಬರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.
ಇಲ್ಲಿನ ಜನರ ಅಪೇಕ್ಷೆಯಂತೆ ಮಠದ ಜಗದ್ಗುರುಗಳನ್ನು ಶ್ರೀನಿವಾಸಪುರಕ್ಕೆ ಕರೆ ತರುವ ಕೆಲಸ ಮಾಡಲಾಗುವುದು ಎಂದರು.ರಾಯಲ್ಪಾಡಿನ ವೆಲ್ಲಾಲ ಸತ್ಯನಾರಾಯಣ ಶಾಸಿ, ಎಸ್‌ಬಿಎಂ ನಿವೃತ್ತ ಅಧಿಕಾರಿ ಆರ್.ಎಸ್. ಪ್ರಕಾಶ್, ಕಾಣಿಪಾಕಂ ದೇವಸ್ಥಾನದ ಪ್ರಧಾನ ಅರ್ಚಕ ಗಣೇಶ್ ಹಾಗೂ ಶ್ರೀನಿವಾಸಪುರ ಶಾಖಾ ಮಠದ ಸಿಬ್ಬಂದಿ ಇದ್ದರು.