

ಕರೊನಾ ಸೋಂಕಿನ ಹಾವಳಿ ಹಲವು ಬಗೆಯ ಸಂಕಷ್ಟಗಳನ್ನು ಸೃಷ್ಟಿಸಿದೆ. ಸೋಂಕು ಪ್ರಸರಣದ ಮೊದಲನೆಯ ಅಲೆಗೆ ಹೋಲಿಸಿದರೆ ಎರಡನೆಯ ಅಲೆಯ ಹೊಡೆತಕ್ಕೆ ಜೀವಹಾನಿ ಪ್ರಮಾಣ ಹೆಚ್ಚಾಗಿದೆ. ಕರ್ನಾಟಕ ಸೇರಿದಂತೆ ಬಹುತೇಕ ಎಲ್ಲ ರಾಜ್ಯಗಳಲ್ಲಿ ಇದೇ ಸ್ಥಿತಿ. ಅದರಲ್ಲೂ ಮುಖ್ಯವಾಗಿ, ಪಾಲಕರನ್ನು ಕಳೆದುಕೊಂಡ ಮಕ್ಕಳ ಸ್ಥಿತಿ ಶೋಚನೀಯ. ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳ ಮುಂದಿನ ಬದುಕು ಹೇಗೆ? ಎಂಬ ಯಕ್ಷಪ್ರಶ್ನೆಗೆ ಕೇಂದ್ರ, ರಾಜ್ಯ ಸರ್ಕಾರ ಮತ್ತು ವಿವಿಧ ಸಮಾಜಮುಖಿ ಸಂಘಸಂಸ್ಥೆಗಳು ಕೂಡ ಸಮರ್ಪಕವಾದ ಉತ್ತರ ನೀಡಿವೆ. ಯಾವುದೇ ಸಂಕಷ್ಟ, ಆಪತ್ತಿನ ಸಂದರ್ಭದಲ್ಲಿಯೂ ಮಾನವೀಯ ಸ್ಪಂದನೆಯೇ ದೊಡ್ಡ ಭರವಸೆ ಮೂಡಿಸಬಲ್ಲದು ಮತ್ತು ಬದಲಾವಣೆಗೆ ಕಾರಣವಾಗಬಲ್ಲದು. ಈ ಕರೊನಾ ಆಪತ್ತಿನಲ್ಲೂ ಇಂಥ ಮಾನವೀಯತೆಯ ದರ್ಶನವಾಗಿದ್ದು, ಈ ನೆಲದ ಹೃದಯವೈಶಾಲ್ಯತೆಗೂ ಸಾಕ್ಷಿ ಎನ್ನಬಹುದು. ಮಕ್ಕಳ ಶಿಕ್ಷಣ ಮತ್ತು ಮುಂದಿನ ಬದುಕಿಗೆ ನೆರವಾಗಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಮಹತ್ವದ ಯೋಜನೆ ಘೋಷಿಸಿರುವುದು ಸ್ವಾಗತಾರ್ಹ. ರಾಜ್ಯ ಸರ್ಕಾರದ ‘ಬಾಲ ಸೇವಾ’ ಯೋಜನೆಯಡಿ, ಕರೊನಾದಿಂದ ಅನಾಥರಾಗಿ ಕೂಡುಕುಟುಂಬದ ಆಶ್ರಯದಲ್ಲಿರುವ ಮಕ್ಕಳ ಭವಿಷ್ಯ ರೂಪಿಸುವ ದೃಷ್ಟಿಯಿಂದ ತಿಂಗಳಿಗೆ 3,500 ರೂ. ನೀಡಲಾಗುತ್ತದೆ. ಅನಾಥರಾಗಿ ಕುಟುಂಬದ ಆಸರೆಯಿಲ್ಲದ 10 ವರ್ಷದೊಳಗಿನ ಮಕ್ಕಳ ಪೋಷಣೆ ಮತ್ತು ಉತ್ತಮ ಶಿಕ್ಷಣ ಒದಗಿಸುವ ದೃಷ್ಟಿಯಿಂದ ಅಂತಹ ಮಕ್ಕಳನ್ನು ಸರ್ಕಾರಿ ಸ್ವಾಮ್ಯದ ಮಾದರಿ ವಸತಿ ಶಾಲೆಗಳಲ್ಲಿ ದಾಖಲು ಮಾಡಿಕೊಳ್ಳಲಾಗುತ್ತದೆ.
‘ಪಿಎಂ-ಕೇರ್ಸ್ ಫಾರ್ ಚಿಲ್ಡ್ರನ್’ ಯೋಜನೆಯಡಿ ಮಗುವಿನ ಹೆಸರಿನಲ್ಲಿ 10 ಲಕ್ಷ ರೂಪಾಯಿ ನಿಶ್ಚಿತ ಠೇವಣಿ ಇರಿಸಲಾಗುತ್ತದೆ. ಮಗುವಿಗೆ 18 ವರ್ಷ ತುಂಬಿದಾಗ ಈ ನಿಧಿಯಿಂದ ಮಾಸಿಕ ಹಣಕಾಸು ನೆರವು ರೂಪದಲ್ಲಿ ಮುಂದಿನ ಐದು ವರ್ಷ ಕಾಲ ಉನ್ನತ ಶಿಕ್ಷಣದ ಅಗತ್ಯಕ್ಕಾಗಿ ನೀಡಲಾಗುತ್ತದೆ. 23 ವರ್ಷ ತುಂಬಿದ ಬಳಿಕ ಈ ಮೊತ್ತ ಇಡುಗಂಟಾಗಿ ಅನಾಥ ಮಕ್ಕಳಿಗೆ ಸಿಗಲಿದೆ. ಆಯುಷ್ಮಾನ್ ಭಾರತ್ ಯೋಜನೆ ಮೂಲಕ ಮಗುವಿಗೆ 18 ವರ್ಷ ತುಂಬುವ ತನಕ ಉಚಿತವಾಗಿ 5 ಲಕ್ಷ ರೂಪಾಯಿ ಮೌಲ್ಯದ ಆರೋಗ್ಯ ವಿಮೆಯೂ ದೊರೆಯಲಿದೆ. ಈ ಯೋಜನೆಗಳ ಸಮರ್ಪಕ ಜಾರಿಗೆ ಅಷ್ಟೇ ಕಾಳಜಿ ವಹಿಸಬೇಕಿದೆ. ನಮ್ಮಲ್ಲಿ ಯಾವುದೇ ಯೋಜನೆ ಬಂದರೂ ಮಧ್ಯವರ್ತಿಗಳು, ದಲ್ಲಾಳಿಗಳು ಹುಟ್ಟಿಕೊಂಡು, ಮೂಲೋದ್ದೇಶವನ್ನೇ ಹಾಳು ಮಾಡುತ್ತಾರೆ. ಅಲ್ಲದೆ, ಮಕ್ಕಳ ಕಳ್ಳಸಾಗಾಣಿಕೆ ಮಾಡುವ, ಮಕ್ಕಳನ್ನು ಭಿಕ್ಷಾಟನೆ, ಇತರ ಅಪರಾಧ ಕೃತ್ಯ, ಲೈಂಗಿಕ ಚಟುವಟಿಕೆಗಳಿಗೆ ಬಳಸುವ ಜಾಲಗಳು ಸಮಾಜದಲ್ಲಿ ಸಕ್ರಿಯವಾಗಿವೆ. ಇಂಥ ದುಷ್ಟಶಕ್ತಿಗಳ ಕೂಪಕ್ಕೆ ಮಕ್ಕಳು ಸಿಗದಂತೆ, ಅವರಿಗೆ ಭದ್ರತೆಯ, ಭರವಸೆಯ ಬದುಕು ರೂಪಿಸಿಕೊಡುವ ಕರ್ತವ್ಯ ಕೇವಲ ಪ್ರಭುತ್ವದ್ದು ಮಾತ್ರವಲ್ಲ, ಎಲ್ಲರದ್ದೂ ಆಗಿದೆ. ಮುಂದಿನ ದಿನಗಳಲ್ಲಿ ಈ ಬಗೆಯ ಮಕ್ಕಳ ಸೂಕ್ತ ನಿಗಾ ಮತ್ತು ಪೋಷಣೆಗೆ ಸಮರ್ಪಕ ವ್ಯವಸ್ಥೆ ಜಾರಿಗೆ ಬರಲಿ, ಈ ಮಕ್ಕಳು ಸಮಾಜದ ಶಕ್ತಿಯಾಗಿ ಬೆಳೆಯುವಂತಾಗಲಿ.