ಸಿಎಂ ಮನವೊಲಿಕೆ: ಖಾದ್ರಿ ಹಿಂದಕ್ಕೆ ಸರಿಯುವುದು ಖಾತ್ರಿ ?

IMG-20241026-WA0017
Published on

ಬೆಂಗಳೂರು: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಕಣದಲ್ಲಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಗೆ ಸೆಡ್ಡು ಹೊಡೆದ ಬಂಡಾಯ ಅಭ್ಯರ್ಥಿ ಅಜ್ಜಂಪೀರ್ ಖಾದ್ರಿಯವರ ಮನವೊಲಿಸಿದ ಸಿಎಂ ಸಿದ್ದರಾಮಯ್ಯ, ಬಂಡಾಯ ಶಮನ ಮಾಡುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗಿದೆ‌.

ಖಾದ್ರಿಯವರನ್ನು ಸಚಿವ ಜಮೀರ್ ಅಹ್ಮದ್ ಅವರು ಸಿಎಂ ಅಧಿಕೃತ ನಿವಾಸ 'ಕಾವೇರಿ'ಗೆ ಕರೆದುಕೊಂಡು ಮುಖ್ಯಮಂತ್ರಿಗೆ ಶನಿವಾರ ಭೇಟಿ ಮಾಡಿಸಿದರು. ಅಧಿಕೃತ ಅಭ್ಯರ್ಥಿ ಗೆಲುವು ಮುಖ್ಯವಾಗಿದ್ದು, ಸ್ಪರ್ಧೆಯಿಂದ ಹಿಂದೆ ಸರಿಯಲು ಸಿದ್ದರಾಮಯ್ಯ ಸೂಚಿಸಿದ್ದಾರೆ.

ಈ ಸಂದರ್ಭದಲ್ಲಿ ಖಾದ್ರಿಯವರು ಟಿಕೆಟ್ ನೀಡದ್ದಕ್ಕೆ ಬೇಸರ ತೋಡಿಕೊಂಡಿದ್ದಾರೆ. ಕ್ಷೇತ್ರದ ಕಾರ್ಯಕರ್ತರು ಹಾಗೂ ಬೆಂಬಲಿಗರ ಒತ್ತಾಸೆಯಂತೆ ನಾಮಪತ್ರ ಸಲ್ಲಿಸಿದ್ದೇನೆ ಎಂದು ವಿವರಿಸಿ, ಕೆಲವು ಬೇಡಿಕೆಗಳನ್ನು ಮಂಡಿಸಿದ್ದಾರೆ. ಈ ಪೈಕಿ ಕಾರ್ಯಸಾಧುವೆನಿಸಿದ ಬೇಡಿಕೆ ಈಡೇರಿಸುವುದಾಗಿ ಸಿಎಂ ಭರವಸೆ ನೀಡಿದಾಗ ನಾಮಪತ್ರ ಹಿಂಪಡೆಯಲು ಖಾದ್ರಿ ಒಪ್ಪಿದರು ಎಂದು ಹೇಳಲಾಗಿದೆ.

ಪ್ರಯತ್ನ ವಿಫಲ

ಶಿಗ್ಗಾಂವಿಗೆ ಶುಕ್ರವಾರ ಹೋಗಿದ್ದ ಜಮೀರ್ ಅಹ್ಮದ್ ಬಂಡೆದ್ದ ಖಾದ್ರಿ ಜತೆಗೆ ರಾಜಿ ಸಂಧಾನ ಮಾಡಿದ್ದರು. ಆದರೆ ನಾಮಪತ್ರ ಸಲ್ಲಿಸಲು ಇನ್ನೇನು 15 ನಿಮಿಷಗಳು ಉಳಿದಿರುವಾಗ ಖಾದ್ರಿ ಓಡೋಡಿ ಹೋಗಿ ನಾಮಪತ್ರ ಸಲ್ಲಿಸಿದ್ದರು. ಇವರಷ್ಟೇ ಅಲ್ಲ, ಕಾಂಗ್ರೆಸ್ ನ ಮತ್ತೊಬ್ಬ ಮಾಜಿ ಶಾಸಕ ಮಂಜುನಾಥ್ ಕುನ್ನೂರು ಸಹಿತ ನಾಮಪತ್ರ ಸಲ್ಲಿಸಿದ್ದಾರೆ‌‌‌.

ಟಿಕೆಟ್ ವಂಚಿತರ ಅತೃಪ್ತಿ ಕೊನೆಗಾಣಿಸುವ ಜಮೀರ್ ಪ್ರಯತ್ನ ವಿಫಲವಾದ ನಂತರ ಖಾದ್ರಿಗೆ ಒಪ್ಪಿಸಿ ಬೆಂಗಳೂರಿಗೆ ಕರೆ ತಂದು ನೇರ ಸಿಎಂ ಸಿದ್ದರಾಮಯ್ಯ ಜತೆಗೆ ಚರ್ಚೆ ವ್ಯವಸ್ಥೆ ಮಾಡಿದ್ದಾರೆ. ಕ್ಷೇತ್ರದಲ್ಲಿ ಮುಸ್ಲಿಂ ಮತಗಳು 55 ಸಾವಿರದಷ್ಟಿವೆ. ಬಂಡಾಯ ಅಭ್ಯರ್ಥಿ ಕಣದಲ್ಲಿ ಉಳಿದರೆ ಸಮಸ್ಯೆಯಾಗಲಿದೆ ಎಂದು ತಿಳಿದು, ಮನವೊಲಿಕೆ ಜವಾಬ್ದಾರಿ ಸಿಎಂ ಸಿದ್ದರಾಮಯ್ಯ ತೆಗೆದುಕೊಂಡಿದ್ದಾರೆ‌.

ಅದೇ ರೀತಿ ಕ್ಷೇತ್ರದಲ್ಲಿ ಮುಸ್ಲಿಂರಂತೆ ಪಂಚಮಸಾಲಿ ಸಮುದಾಯವು ನಿರ್ಣಾಯಕವಾಗಿದೆ. ಇದೇ ಸಮುದಾಯಕ್ಕೆ ಸೇರಿದ ಕುನ್ನೂರು ಉಮೇದುವಾರಿಕೆ ಹಿಂತೆಗೆಸುವುದು ಬಾಕಿಯಿದೆ. ನಾಮಪತ್ರ ವಾಪಸ್ ಗೆ ಅ.30 ಕೊನೇ ದಿನವಾಗಿದ್ದು, ಅಷ್ಟರೊಳಗೆ ಶಿಗ್ಗಾಂವಿ ಕ್ಷೇತ್ರದಲ್ಲಿ ಪಕ್ಷದೊಳಗೆ ತಲೆ ಎತ್ತಿರುವ ಅಸಮಾಧಾನ ಸರಿಪಡಿಸುವ ಸವಾಲು ಸಿಎಂ ಸಿದ್ದರಾಮಯ್ಯ ಹೆಗಲೇರಿದೆ ಎಂದು ಪಕ್ಷದ ಮೂಲಗಳು ಹೇಳುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net