

ಬೆಂಗಳೂರು: ಗ್ಯಾರಂಟಿಗಳ ಭರಾಟೆಯಲ್ಲಿ ಅಭಿವೃದ್ಧಿಯನ್ನೇ ಸರ್ಕಾರ ನಿರ್ಲಕ್ಷಿಸಿದೆ ಎಂಬ ಪ್ರತಿಪಕ್ಷಗಳ ಟೀಕೆ-ಟಿಪ್ಪಣಿಯ ನಿಜಾಂಶವನ್ನು ಸಿಎಂ ಸಿದ್ದರಾಮಯ್ಯ ಅರಿತುಕೊಂಡರು !. ಸ್ವಪಕ್ಷದ ಶಾಸಕರ ವಿಶ್ವಾಸ ಇನ್ನಷ್ಟು ಗಟ್ಟಿಗೊಳಿಸುವ ಇಚ್ಛಿಸಿರುವೆ ಎಂಬ ಸಂದೇಶವನ್ನೂ ರವಾನಿಸಿದರು.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಶನಿವಾರ ನಡೆದ ಶಾಸಕರೊಂದಿಗೆ ಮುಖಾಮುಖಿ ಚರ್ಚೆಯು ಎರಡು ಆಯಾಮವನ್ನು ಪಡೆಯಿತು. ಸಚಿವ ಸಂಪುಟದ ಸಹೋದ್ಯೋಗಿಗಳು, ಆಡಳಿತ ಯಂತ್ರದ ಕಾರ್ಯವೈಖರಿ ತಿಳಿದುಕೊಳ್ಳಲು ನೆರವಾಯಿತು.
ಮುಂದುವರಿದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ, ವಿಧಾನಸಭೆ ಕ್ಷೇತ್ರಮಟ್ಟದ ಸಮಸ್ಯೆಗಳು ಹಾಗೂ ಅಧಿಕಾರಿಗಳು ಸ್ಪಂದಿಸುವ ಬಗೆಯನ್ನು ನೇರ ಮಾತುಕತೆ ಮನವರಿಕೆ ಮಾಡಿಕೊಟ್ಟಿತು. ಕ್ಷೇತ್ರಾವಾರು ಅವಶ್ಯಕತೆಗಳು, ಅಭಿವೃದ್ಧಿ ಯೋಜನೆಗಳ ಪ್ರಗತಿ ಮಾಹಿತಿ ಹಂಚಿಕೆಗೆ ವೇದಿಕೆಯಾಯಿತು.
ಸಂಪರ್ಕ, ಸಂವಹನ ಕೊರತೆಯಿಂದ ಅಸಮಾಧಾನ, ಸಚಿವರು ಮತ್ತು ಉನ್ನತ ಅಧಿಕಾರಿಗಳ ವಿರುದ್ಧ ಶಾಸಕರು ದೂರುವುದನ್ನು ಕೊನೆಗಾಣಿಸಲು ಎರಡನೇ ಹಂತದಲ್ಲಿ ಪ್ರತಿಯೊಬ್ಬ ಶಾಸಕರ ನೇರ ಭೇಟಿ ಮತ್ತು ಮುಕ್ತ ಮಾತುಕತೆಗೆ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ.
ಈ ನಿರ್ಧಾರದ ಭಾಗವಾಗಿ ಶನಿವಾರ ಬೆಳಗ್ಗೆ 11 ರಿಂದ ಮಧ್ಯಾಹ್ನದವರೆಗೆ ಭೇಟಿ, ಮುಖಾಮುಖಿ ಚರ್ಚೆಯಾಗಿದ್ದು, ಮೊದಲ ದಿನವೇ ಎಂಎಲ್‌ಎಗಳು ಭೇಟಿ ಮಾಡಿರುವುದು ಅವರಲ್ಲಿನ ಉತ್ಸಾಹಕ್ಕೆ ಕೈಗನ್ನಡಿಯಾಗಿದೆ.
ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು, ವಿವಿಧ ಯೋಜನೆಗಳಡಿ ಮಂಜೂರಾದ ಕಾಮಗಾರಿ ಸ್ಥಿತಿಗತಿ, ಅನುದಾನ ಹಂಚಿಕೆ, ಸಿಎಂ ಸೂಚನೆಗೆ ಉನ್ನತ ಅಧಿಕಾರಿಗಳು ಸ್ಪಂದಿಸುತ್ತಿರುವ ಪರಿ, ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ಅಧಿಕಾರಿಗಳ ಕಾರ್ಯಶೈಲಿಯನ್ನು ಶಾಸಕರು ಪ್ರಸ್ತಾಪಿಸಿದ್ದಾರೆ.
ಹಲವು ಹೊಸ ಬೇಡಿಕೆಗಳು, ಬೆಂಬಲಿಗರು ಮತ್ತು ಕಾರ್ಯಕರ್ತರ ಕೋರಿಕೆಗಳನ್ನು ಇದೇ ವೇಳೆ ಶಾಸಕರು ಮಂಡಿಸಿದ್ದು, ಪರಿಶೀಲಿಸಿ ಕಾರ್ಯಸಾಧು, ಆರ್ಥಿಕ ಲಭ್ಯತೆಗೆ ಅನುಸಾರ ಕ್ರಮವಹಿಸುವ ಭರವಸೆಯನ್ನೂ ಸಿದ್ದರಾಮಯ್ಯ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೊದಲ ಹಂತದಲ್ಲಿ ಆಯಾ ಜಿಲ್ಲೆಯ ಸಚಿವರ ಜತೆಗೆ ಶಾಸಕರ ಜಿಲ್ಲಾವಾರು ಸಭೆಗಳು ನಡೆದಿದ್ದವು. ಎರಡನೇ ಹಂತದ ವೈಯಕ್ತಿಕ ಭೇಟಿಯನ್ನು ಶಾಸಕರು ಪ್ರಶಂಸಿಸಿದ್ದು, ತಿಂಗಳಲ್ಲಿ ಒಂದೆರಡು ಬಾರಿ ಹೀಗೆ ಚರ್ಚಿಸಲು ಸಿದ್ದರಾಮಯ್ಯ ಬಯಸಿದ್ದಾರೆ ಎಂದು ತಿಳಿದಿದೆ.