

ಬೆಂಗಳೂರು: ಚಾಮರಾಜಪೇಟೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಅನಿರೀಕ್ಷಿತ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಮಯ ಕಳೆದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಲ್ಲಿನ ವ್ಯವಸ್ಥೆಗಳ ಕುರಿತು ಮಕ್ಕಳಿಂದಲೇ ಮಾಹಿತಿ ಪಡೆದರು. ಅದಕ್ಕೂ ಮುಖ್ಯವಾಗಿ ಮಕ್ಕಳೊಂದಿಗೆ ಮಕ್ಕಳಂತಾಗಿ ಸಮಯ ಕಳೆದರು, ಪುಟ್ಟ ಮಕ್ಕಳ ಜತೆ ಊಟವನ್ನೂ ಸವಿದರು.
ಮೊದಲಿಗೆ 10ನೇ ತರಗತಿಗೆ ಸಿಎಂ ಮತ್ತು ಸಚಿವರ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು. ಈ ವೇಳೆ ಪಠ್ಯ ಪುಸ್ತಕರ ಬಾತ್ ರೂಂ ಕಿಟ್‌ಗಳ ಸಮರ್ಪಕ ವಿತರಣೆ ಆಗುತ್ತಿದೆ ಎಂದ ವಿದ್ಯಾರ್ಥಿಗಳು ಮಾಹಿತಿ ಹಂಚಿಕೊಂಡರು.
ಊಟದ ವ್ಯವಸ್ಥೆ ಬಗ್ಗೆ ಕೇಳಿದ ಸಿಎಂಗೆ ಬೆಳಗ್ಗೆ ದೋಸೆ, ಮಧ್ಯಾಹ್ನ ಊಟ ಚೆನ್ನಾಗಿತ್ತು, ಆಗಾಗ ಪಲಾವ್ ಕೊಡುತ್ತಾರೆ ಎಂದು ಮಕ್ಕಳು ಖುಷಿ ವ್ಯಕ್ತಪಡಿಸಿದರು. ಹಾಗೆಯೇ ನಮ್ಮ ಆರೋಗ್ಯ ತಪಾಸಣೆಗೆ ನಿಯಮಿತವಾಗಿ ವೈದ್ಯರು ಬರುತ್ತಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತರ ಶಾಲೆಗಳಿಗೆ ಹೋಲಿಸಿದರೆ ವಸತಿ ಶಾಲೆಗಳು ಗುಣಮಟ್ಟದಲ್ಲಿ ಉತ್ತಮವಾಗಿದ್ದರೂ, ವಸತಿ ಶಾಲೆಗಳಿಗೆ ಇನ್ನಷ್ಟು ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕಾಗುತ್ತದೆ, ಆ ಕೆಲಸ ಮಾಡುತ್ತೇವೆ ಎಂದರು.
ರಾಜ್ಯದಲ್ಲಿ 833 ವಸತಿ ಶಾಲೆಗಳಿದ್ದು, ಎಲ್ಲಾ ವಸತಿ ಶಾಲೆಗಳಿಗೆ ಸುಸಜ್ಜಿತವಾದ ಕಟ್ಟಡಗಳನ್ನು ಹಂತಹಂತವಾಗಿ ನಿರ್ಮಿಸಲಾಗುತ್ತಿದೆ. ಎಲ್ಲಾ ಆಶ್ರಮ ಶಾಲೆಗಳನ್ನು ವಸತಿ ಶಾಲೆಗಳಾಗಿ ಪರಿರ್ವತಿಸುತ್ತಿದ್ದೇವೆ. ಈ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಊಟ, ವಾಸ್ತವ್ಯ ವ್ಯವಸ್ಥೆ ಮಾತ್ರವಲ್ಲದೆ ಇಂಗ್ಲಿಷ್, ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಕೋಚಿಂಗ್ ಸಹ ನೀಡುತ್ತಿದ್ದೇವೆ ಎಂದು ಹೇಳಿದರು.
ಸಮಾಜಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಸೇರಿ ಇತರರು ಉಪಸ್ಥಿತರಿದ್ದರು.