

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಕಲ್ವಕುಂಟ್ಲ ಕವಿತಾ ಗುರುವಾರ ವಿಧಾನಪರಿಷತ್ ಸದಸ್ಯೆ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ಅವರ ರಾಜಕೀಯ ಜೀವನದ ಸೆಕೆಂಡ್ ಇನ್ನಿಂಗ್ಸ್ ಆರಂಭವಾಗಿದೆ ಎನ್ನಲಾಗುತ್ತಿದೆ.
ಕಾಮರೆಡ್ಡಿ ಹಾಗೂ ನಿಜಾಮಾಬಾದ್ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಸದಸ್ಯೆ ಆಗಿ ಪ್ರಮಾಣವಚನ ಸ್ವೀಕರಿಸಿದ್ದೇನೆ. ಇದಕ್ಕಾಗಿ ನಾನು ನನ್ನ ಪಕ್ಷಕ್ಕೆ ಹಾಗೂ ನನ್ನನ್ನು ಆಯ್ಕೆ ಮಾಡಿದ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಅವರು ಪ್ರಮಾಣ ವಚನ ಸ್ವೀಕರಿಸಿದ ಬೆನ್ನಿಗೇ ಟ್ಟೀಟ್ ಮಾಡಿ ಹೇಳಿಕೊಂಡಿದ್ದಾರೆ.
ಈ ಮೂಲಕ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಏಕೈಕ ಪುತ್ರಿ ಹಾಗೂ ಅವರ ಕುಟುಂಬದ ಏಕೈಕ ಮಹಿಳೆ ರಾಜಕೀಯವಾಗಿ ಅಧಿಕಾರ ಸ್ವೀಕರಿಸಿದಂತಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದ ಕವಿತಾ, ಈ ಮೂಲಕ ರಾಜಕೀಯವಾಗಿ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿದಂತಾಗಿದೆ ಎನ್ನಲಾಗುತ್ತಿದೆ. (ಏಜೆನ್ಸೀಸ್)