

ಬೆಂಗಳೂರು:
ಮುಖ್ಯಮಂತ್ರಿಗಳ ಜನತಾದರ್ಶನ ಬಳಿಕ ಜಿಲ್ಲಾಡಳಿತದ ಮೇಲೆ ಜವಬ್ದಾರಿ ಹೆಚ್ಚಾಗಿದೆ. ಸಿಎಂ ಸೂಚನೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತಗಳು ಜನತಾದರ್ಶನ ಅರ್ಜಿಗಳ ಬಗ್ಗೆ ವಿಶೇಷ ಗಮನಹರಿಸಿವೆ. ಮತ್ತೊಂದೆಡೆ ಹೆಚ್ಚಿನ ಸಮಸ್ಯೆಗಳು ನಾಡಿನ ದೊರೆಯ ತನಕ ಹೋಗಬಾರದು ಎನ್ನುವ ನಿಟ್ಟಿನಲ್ಲಿ ತಾಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಲು ಜಿಲ್ಲಾಡಳಿತಗಳು ಗಮನಹರಿಸಿವೆ.
ಅತಿ ಹೆಚ್ಚು ಸಮಸ್ಯೆಗಳು ಕಂದಾಯ, ಗ್ರಾಮೀಣಾಭಿವೃದ್ಧಿ ಇಲಾಖೆ, ಶಿಕ್ಷಣ ಮತ್ತು ಪೊಲೀಸ್ ಇಲಾಖೆಗೆ ಸಂಬಂದಿಸಿದಂತೆ ಇರುವುದರಿಂದ ಈ ಬಗ್ಗೆ ವಿಶೇಷವಾಗಿ ಗಮನ ನೀಡಬೇಕು. ಪ್ರತಿ ತಿಂಗಳು ಗ್ರಾಪಂ ಮಟ್ಟದಲ್ಲಿ ಗ್ರಾಮ ಸಂಪರ್ಕ ಸಭೆಗಳನ್ನು ಕಡ್ಡಾಯವಾಗಿ ನಡೆಸಬೇಕು ಎಂದು ಜಿಲ್ಲಾಡಳಿತಗಳು ತಾಲೂಕು ಆಡಳಿತಕ್ಕೆ ಸೂಚನೆ ನೀಡಿವೆ.
ಪಟ್ಟಣ, ನಗರ ಮತ್ತು ಮಹಾನಗರ ವ್ಯಾಪ್ತಿಯಲ್ಲಿ ಆಸ್ತಿ ವಿವಾದಗಳು ಹೆಚ್ಚಾಗಿ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆಯೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಿಎಂ ಸಚಿವಾಲಯದಿಂದ ಸೂಚನೆ ರವಾನಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳೇ ಖುದ್ದು ಮಾತನಾಡಿ ಎಚ್ಚರಿಕೆ ನೀಡಿರುವುದನ್ನು ನೆನಪಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಜನಸಾಮಾನ್ಯರ ಅರ್ಜಿಯನ್ನು ಖುದ್ದು ಮುಖ್ಯಮಂತ್ರಿಗಳೇ ಸ್ವೀಕರಿಸಿ, ಎಲ್ಲರ ಎದುರು ಸಂಬಂದಿಸಿದ ಅಧಿಕಾರಿಗಳ ಗಮನಕ್ಕೆ ತರುತ್ತಿರುವುದು ಆಯಾ ಇಲಾಖೆ ಅಧಿಕಾರಿಗಳಿಗೆ ಮುಜುಗರ ತರುವ ಸನ್ನಿವೇಶ ಉಂಟಾಗುತ್ತಿದೆ. ತಳಮಟ್ಟದ ಅಧಿಕಾರಿಗಳು ಜನಮುಖಿಯಾಗಿ, ಕ್ರಿಯಾಶೀಲವಾಗಿ ಕೆಲಸ ಮಾಡಿದ್ದರೆ ಇಷ್ಟೊಂದು ಸಮಸ್ಯೆ ಮುಖ್ಯಮಂತ್ರಿಗಳ ತನಕ ಹೋಗುತ್ತಿರಲಿಲ್ಲ. ಆದ್ದರಿಂದ ಸಾರ್ವಜನಿಕ ಅರ್ಜಿ ಮತ್ತು ಕಡತ ವಿಲೇವಾರಿ ಬಗ್ಗೆ ಹೆಚ್ಚು ಆದ್ಯತೆ ನೀಡಲು ಸೂಚಿಸಲಾಗಿದೆ ಎಂದು ಸಿಎಂ ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.