ಸಿಎಂ ಆಯ್ಕೆ ಮಾಡೋದು ಶಾಸಕರು ಮಠಾಧೀಶರಲ್ಲ

Sharanabasappa
ಶರಣಬಸಪ್ಪ ದರ್ಶನಾಪುರ
Published on

ಕೋಲಾರ: ರಾಜ್ಯದ ಸಿಎಂ ಅವರನ್ನು ಆಯ್ಕೆ ಮಾಡುವುದು ಶಾಸಕರು ಹಾಗೂ ಹೈಕಮಾಂಡ್ ತೀರ್ಮಾನ. ಮಠಾಧೀಶರಲ್ಲ, ಸ್ವಾಮೀಜಿಗಳಿಂದ ಮುಖ್ಯಮಂತ್ರಿಗಳು ಆಗುವುದಾದರೆ ಚುನಾವಣೆ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜಾತಿ, ಧರ್ಮಕ್ಕೊಂದೊಂದು ಮಠಾಧೀಶರು ಇದ್ದಾರೆ. ಡಿ.ಕೆ.ಶಿವಕುಮಾರ್ ಸಿಎಂ ಆಗುವುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಸದ್ಯಕ್ಕೆ ಪಕ್ಷದ 138 ಶಾಸಕರು ಡಿಸಿಎಂ ಮತ್ತು ಸಿಎಂ ಪರವಿದ್ದೇವೆ ಎಂದರು.

ಎಲ್ಲರಿಗೂ ಆಸೆ ಇರುತ್ತದೆ. ಮೊದಲು ಎಂಎಲ್‌ಎ ಆಗಬೇಕು, ನಂತರ ಸಚಿವರಾಗಬೇಕು, ಆಮೇಲೆ ಸಿಎಂ, ಪಿಎಂ ಆಗಬೇಕು ಅಂತಾ. ಆದರೆ, ಸಿಎಂ ಆಗುವುದು ಒಬ್ಬರೇ, ಪಿಎಂ ಆಗುವುದೂ ಒಬ್ಬರೇ. ಎಲ್ಲವೂ ಆಗಬೇಕು ಎನ್ನುವುದು ತಪ್ಪಲ್ಲ. ಆದರೆ, ಆಸೆ ಇರಬೇಕು, ದುರಾಸೆ ಇರಬಾರದು ಎಂದರು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ಅನಿವಾರ್ಯ ಸಂದರ್ಭದಲ್ಲಿ ಎರಡೆರಡು ಹುದ್ದೆ ನಿಭಾಯಿಸಿದ ಉದಾಹರಣೆ ಇವೆ. ಹೈಕಮಾಂಡ್ ತೀರ್ಮಾನ ತೆಗೆದುಕೊಳುತ್ತದೆ. ಸದ್ಯ ಸಿಎಂ ಮತ್ತು ಅಧ್ಯಕ್ಷರ ಬದಲಾವಣೆ ಪ್ರಸ್ತಾಪವಿಲ್ಲ ಎಂದರು.

ಸುರ್ಜೇವಾಲ ಸೂಪರ್ ಸಿಎಂ ಕುರಿತು ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಸಿಎಂ ಆಗಿದ್ದಾಗ ಯಾರು ಸೂಪರ್ ಸಿಎಂ?, ಫಸ್ಟ್ ಅವರು ಉತ್ತರ ಕೊಡಲಿ, ನಾನು ಅಲ್ಲಿಂದಲೇ ಬಂದವನು ಎಂದು ಎಚ್‌ಡಿಕೆಗೆ ಟಾಂಗ್ ನೀಡಿದ ಅವರು, ಸುರ್ಜೇವಾಲ ಅವರಿಂದ ಸಚಿವರಿಗೆ ಬುಲಾವ್ ಕುರಿತು, `ನಮ್ಮನ್ನು ಕರೆದಿಲ್ಲ' ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net