

ಬೆಂಗಳೂರು: ಯಾರೂ ಯೋಚನೆ ಮಾಡದ ಹೊಸ ಜಾತಿಗಳನ್ನು ಸಿಎಂ ಸಿದ್ದರಾಮಯ್ಯ ಸೃಷ್ಟಿಸಿದ್ದು, ಮತಾಂತರಕ್ಕೆ ರಾಯಭಾರಿಯಾಗಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ಮಾಡಿದರು.
ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಇಲ್ಲದ ಜಾತಿಗಳನ್ನು ಸಮೀಕ್ಷೆಗೆ ಪರಿಗಣಿಸಿದರೆ ಸಂವಿಧಾನಬಾಹಿರವಾಗಲಿದೆ. ಈ ಸಮೀಕ್ಷೆ ಮೂಲಕ ಮತಾಂತರಕ್ಕೆ ಪ್ರೇರಣೆ ನೀಡಲಾಗುತ್ತಿದೆ ಎಂದು ದೂರಿದರು.
ಹಿಂದು ಧರ್ಮದಲ್ಲಿ ಅಸಮಾನತೆಯಿದೆ ಎನ್ನುವ ಸಿಎಂ, ಮುಸ್ಲಿಮ್ ಧರ್ಮದಲ್ಲಿನ ಅಸಮಾನತೆ, ಮಹಿಳೆಯರ ಕಡೆಗಣನೆ ಬಗ್ಗೆ ಚಕಾರ ಎತ್ತುವುದಿಲ್ಲ ಏಕೆ ?. ಹಿಂದು ಧರ್ಮದಂತೆ ಬೇರೆ ಧರ್ಮಗಳ ಬಗ್ಗೆ ಮಾತನಾಡಲಿ ಎಂದು ಸವಾಲೆಸೆದರು.
ಧರ್ಮಸ್ಥಳ ಗ್ರಾಮದ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ನಿಧಾನವಾಗಿದೆ. ವಿಚಾರಣೆ ಎದುರಿಸಿದವರು ಹೊರಗೆ ಬಂದು ಹೇಳಿಕೆ ನೀಡುತ್ತಿದ್ದು, ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಆರ್.ಅಶೋಕ್ ಎಚ್ಚರಿಸಿದರು.
ಧರ್ಮಸ್ಥಳ ಪುಣ್ಯಕ್ಷೇತ್ರಕ್ಕೆ ಕಳಂಕ ಮೆತ್ತುವ ಷಡ್ಯಂತ್ರವೆಂಬುದು ಹೊರಬಿದ್ದಿದೆ. ಸರಿಯಾದ ರೀತಿ, ವೇಗವಾಗಿ ನಡೆಸಬೇಕಾಗಿದೆ. ಹಿಂದು ವಿರೋಧಿಗಳ ನಡೆಸುತ್ತಿರುವ ಕುತಂತ್ರದ ವಿರುದ್ಧ ಕೋರ್ಟ್‌ಗೆ ಮೊರೆ ಹೋಗುತ್ತೇವೆ ಎಂದು ತಿಳಿಸಿದರು.
ಹಿಂದು ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವುದೇ ಮೈಸೂರು ದಸರಾ ಹಬ್ಬವೇ ಹೊರತು ಕಾಯ್ದೆ ಅಥವಾ ಕಟ್ಟಳೆಯಲ್ಲ. ವಿಜಯನಗರ ಅರಸರು ಆರಂಭಿಸಿದ ನಾಡಹಬ್ಬವನ್ನು ಮೈಸೂರು ಅರಸರು ಮುಂದುವರಿಸಿದ್ದಾರೆ. ವಾಸ್ತವಿಕತೆ ಮರೆಮಾಚಿ ಹಿಂದು, ಮುಸ್ಲಿಮರ ನಡುವೆ ಒಡಕು ಮೂಡಿಸಲು ಕಾಂಗ್ರೆಸ್ ಸರ್ಕಾರ ಹವಣಿಸಿದೆ ಎಂದು ಆರೋಪಿಸಿದರು.
ಬೆಂಗಳೂರಿನಲ್ಲಿ 5,000 ಕೋಟಿ ರೂ. ಬಿಡುಗಡೆಯಾಗಿದ್ದರೂ ರಸ್ತೆ ದುರಸ್ತಿ ಮಾಡಿಲ್ಲ. ಶುದ್ಧ ಕುಡಿಯುವ ನೀರಿನ ಘಟಕದ 20 ಲೀಟರ್ ನೀರಿನ ದರವನ್ನು 5 ರಿಂದ 10 ರೂ. ಗೆ ಏರಿಸಲಾಗಿದೆ. ತೈಲ ದರ, ಹಾಲಿನ ದರ ಏರಿಕೆ, ಹೊಸದಾಗಿ ಕಸ ಶುಲ್ಕ ಹೇರಲಾಗಿದೆ. ಇನ್ನು ಗಾಳಿಗೂ ಶುಲ್ಕ ತಂದರೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಬ್ರ್ಯಾಂಡ್ ಬೆಂಗಳೂರು ಸಾಕಾರವಾಗಲಿದೆ. 65-70,000 ಕೋಟಿ ರೂ.ನಷ್ಟು ಹೆಚ್ಚುವರಿ ತೆರಿಗೆಯನ್ನು ಹೇರಲಾಗಿದೆ ಎಂದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಕಾಂಗ್ರೆಸ್ ಸರ್ಕಾರ ಐದು ಹೋಳು ಮಾಡಿದ್ದು, ಅಭಿವೃದ್ಧಿ ಕೆಲಸಗಳನ್ನು ದಿಕ್ಕೆಡಿಸಿದೆ. ರಸ್ತೆ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗಿಲ್ಲ, 198 ವಾರ್ಡ್ ಇಂಜಿನಿಯರ್ ಹುದ್ದೆಗಳ ಶೇ.90ರಷ್ಟು ಖಾಲಿಯಿವೆ.
ಆದರೆ ಡಿಸಿಎಂ ಡಿ.ಕೆ.ಶಿವಕುಮಾರ್ ಒಂದು ಸಾವಿ ಇಂಜಿನಿಯರ್‌ಗಳನ್ನು ನೇಮಕಾತಿ ಮಾಡಿಕೊಳ್ಳುತ್ತೇವೆ ಎಂದಿದ್ದು, ಹಣ ಎಲ್ಲಿದೆ ?. ಅಭಿವೃದ್ಧಿ ಕಾಮಗಾರಿಗಳು ಸ್ಥಗಿತವಾಗಿದ್ದೇಕೆ ? ಎಂದು ಆರ್.ಅಶೋಕ್ ಪ್ರಶ್ನಿಸಿದರು.