ಸಿಎಂ ಇಬ್ರಾಹಿಂ ಪುತ್ರ ಫೈಜ್ ಕಾಂಗ್ರೆಸ್ ಸೇರ್ಪಡೆ! ನೆಕ್ಸ್ಟ್ ತಂದೆಯ ಸರದಿ?

cm
Published on

ಬೆಂಗಳೂರು: ರಾಜಕೀಯವಾಗಿ ಅತಂತ್ರವಾಗಿರುವ ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ ಅವರು ತಮ್ಮ ಮಗನ ರಾಜಕೀಯ ಭವಿಷ್ಯದ ನಿಟ್ಟಿನಲ್ಲಿ ಕಾಂಗ್ರೆಸ್‌ ಜೊತೆಗೆ ಮರುಸಂಧಾನ ಮಾಡಿಕೊಂಡಿದ್ದಾರೆ. ಹೌದು, ಅವರ ಪುತ್ರ ಫೈಜ್ ಶುಕ್ರವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಜಮೀರ್ ಅಹಮದ್ ಖಾನ್ ನೇತೃತ್ವದಲ್ಲಿ ಫೈಜ್ ಇಬ್ರಾಹಿಂ ಕಾಂಗ್ರೆಸ್​ಗೆ ಅಧಿಕೃತವಾಗಿ ಸೇರ್ಪಡೆಯಾದರು. ಆದರೆ ಈ ಕಾರ್ಯಕ್ರಮದಲ್ಲಿ ಸಿಎಂ ಇಬ್ರಾಹಿಂ ಅವರು ಭಾಗಿಯಾಗಿಲ್ಲ. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿ ಹಲವು ನಾಯಕರು ಉಪಸ್ಥಿತರಿದ್ದರು.

ಕೇಂದ್ರ ಮಾಜಿ ಸಚಿವ ಸಿಎಂ ಇಬ್ರಾಹಿಂ ಕಾಂಗ್ರೆಸ್ ತೊರೆದು ಜೆಡಿಎಸ್‌ ಸೇರ್ಪಡೆಗೊಂಡಿದ್ದರು. ಜೆಡಿಎಸ್‌ನಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾಗಿ ರಾಜ್ಯಾದ್ಯಂತ ಪ್ರಚಾರ ಮಾಡಿದ್ದರು. ಆದರೆ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಹೀನಾಯವಾಗಿ ಸೋಲನ್ನು ಕಂಡಿತ್ತು. ಕೇವಲ 19 ಸ್ಥಾನಗಳನ್ನು ಮಾತ್ರ ಗೆದ್ದುಕೊಂಡಿತ್ತು.

ತಂದೆಯ ಹಾಗೆ ಫೈಜ್ ಸಹ ಜೆಡಿಎಸ್ ಪಕ್ಷದಲ್ಲಿದ್ದರು ಮತ್ತು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹುಮನಾಬಾದ್ ಕ್ಷೇತ್ರದಿಂದ ಸ್ಪರ್ಧಿಸಿ ಸೋತ್ತಿದ್ದರು. ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ತರಲು ಸಚಿವ ಜಮೀರ್ ಅಹ್ಮದ್ ಖಾನ್ ನಿರ್ಣಾಯಕ ಪಾತ್ರ ವಹಿಸಿರುವರೆಂದು ವರದಿಯಾಗಿದೆ. ಇಬ್ರಾಹಿಂ ಮತ್ತು ಸಿದ್ದರಾಮಯ್ಯ ನಡುವೆ ದಶಕಗಳ ಸ್ನೇಹ ಮತ್ತು ಹೋಗೋ ಬಾರೋ ಅನ್ನುವ ಸಲುಗೆ ಇದೆ.

ನಿಮಗೆ ನೆನಪಿರಬಹುದು, ಹಿಂದೆ ಸಿದ್ದರಾಮಯ್ಯ ಮತ್ತು ಇಬ್ರಾಹಿಂ ಜೆಡಿಎಸ್ ಪಕ್ಷದ ಪ್ರಭಾವಿ ನಾಯಕರಾಗಿದ್ದರು. ಫೈಜ್ ಅಲ್ಲದೆ ಇನ್ನೂ ಹಲವಾರು ಮುಖಂಡರು ಇಂದು ಕಾಂಗ್ರೆಸ್ ಪಕ್ಷ ಸೇರಿದರು. ಮಗ ಕಾಂಗ್ರೆಸ್ ಸೇರಿಯಾಯ್ತು, ಪ್ರಾಯಶ: ಇಬ್ರಾಹಿಂ ಸಹ ಕಾಂಗ್ರೆಸ್ ಸೇರುವುದನ್ನು ನಾವು ಇಷ್ಟರಲ್ಲೇ ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net