

ಬೆಂಗಳೂರು: ರಾಜ್ಯದ 3 ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಸಂದರ್ಭದಲ್ಲೇ ಪರಿಶಿಷ್ಟ ಜಾತಿ ಮೀಸಲು ವರ್ಗೀಕರಣ ವಿಚಾರ ಸರ್ಕಾರಕ್ಕೆ ತಲೆಬೇನೆ ತರಿಸಿದೆ. ಎಡ ಸಮುದಾಯದ ವಿಶ್ವಾಸ ಗಳಿಸಲು ಸರ್ಕಸ್ ಆರಂಭಿಸಿರುವ ಸಿಎಂ ಸಿದ್ದರಾಮಯ್ಯ ಅ.24ರ ಸಚಿವ ಸಂಪುಟ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲು ನಿರ್ಧರಿಸಿದ್ದಾರೆ. ಶನಿವಾರ ಒಳಮೀಸಲಾತಿ ವಿಚಾರವಾಗಿ ನಡೆದ ಸಚಿವರು, ಮಾಜಿ ಸಚಿವರು, ಶಾಸಕರು, ಅಧಿಕಾರಿಗಳ ಸಭೆ ಯಲ್ಲಿ ಈ ತೀರ್ಮಾನ ಹೊರಬಿದ್ದಿದೆ. ಸಚಿವ ಮುನಿಯಪ್ಪ ಸಭೆಯ ನಿರ್ಧಾರಗಳ ಮಾಹಿತಿ ಹಂಚಿಕೊಂಡರು.
ಮೂರು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಹೊಸ್ತಿಲಲ್ಲೇ ಪರಿಶಿಷ್ಟ ಜಾತಿ ಮೀಸಲು ವರ್ಗೀಕರಣ ವಿಷಯದಲ್ಲಿ ದಮನಿತರು ಅದರಲ್ಲೂ ಎಡ ಸಮುದಾಯಗಳ ವಿಶ್ವಾಸ ಗಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕಸರತ್ತು ಆರಂಭಿಸಿದ್ದಾರೆ. ಶನಿವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಒಳಮೀಸಲಾತಿ ಕುರಿತು ಸಚಿವರು, ಮಾಜಿ ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ಜಂಟಿ ಸಭೆ ನಡೆಸಿದ ಸಿದ್ದರಾಮಯ್ಯ 24ರ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಬಗ್ಗೆ ರ್ಚಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವ ಸಂದೇಶ ಸಾರಿದ್ದಾರೆ.
ಸುಪ್ರೀಂಕೋರ್ಟ್ ಸ್ಪಷ್ಟ ಆದೇಶ ನೀಡುವ ಜತೆಗೆ ಮರು ಪರಿಶೀಲನಾ ಅರ್ಜಿ ತಿರಸ್ಕೃತಗೊಂಡಿರುವ ಕಾರಣ ಒಳಮೀಸಲು ಜಾರಿಗೊಳಿಸಲೇಬೇಕಾದ ಅನಿವಾರ್ಯತೆ ರಾಜ್ಯ ಸರ್ಕಾರಕ್ಕೆ ಎದುರಾಗಿದೆ. ಎಸ್ಸಿ, ಒಬಿಸಿಗಳಿಗೆ ಮೀಸಲು, ಸಾಮಾಜಿಕ ನ್ಯಾಯ ಹಂಚಿಕೆಯಲ್ಲಿ ಸದಾ ಮೇಲ್ಪಂಕ್ತಿ ನಿರ್ಣಯ ಕೈಗೊಂಡು, ಅನುಷ್ಠಾನಕ್ಕೆ ತರುವಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಆದರೆ ಎಸ್ಸಿ ಮೀಸಲು ವರ್ಗೀಕರಣ ವಿಳಂಬದಿಂದ ರಾಜ್ಯ ಸರ್ಕಾರ ಮಾತ್ರವಲ್ಲ, ಕಾಂಗ್ರೆಸ್ ನಡೆ ಬಗ್ಗೆ ಶೋಷಿತ ಸಮುದಾಯಗಳಲ್ಲಿ ಸಂದೇಹ, ಅಪನಂಬಿಕೆ ಹೆಚ್ಚತೊಡಗಿರುವುದು ಕೈಪಡೆಯನ್ನು ಚಿಂತೆಗೆ ದೂಡಿದೆ. ಒಳಮೀಸಲು ಇತ್ಯರ್ಥವಾಗದೆ ಮೂರು ಕ್ಷೇತ್ರಗಳ ಉಪ ಚುನಾವಣೆ ಜತೆಗೆ ಮುಂಬರುವ ಎಲ್ಲ ಚುನಾವಣೆಗಳಲ್ಲೂ ನಷ್ಟವಾಗಲಿದೆ ಎಂಬ ಭೀತಿ ಕಾಂಗ್ರೆಸ್ ಅನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮಾದಿಗ ಸಮುದಾಯದ ಹಿರಿಯರನ್ನು ಕರೆದು, ಉನ್ನತಾಧಿಕಾರಿಗಳ ಸಮ್ಮುಖ ಸಿಎಂ ಸಿದ್ದರಾಮಯ್ಯ ಸಮಾಲೋಚಿಸಿದ್ದಾರೆ. ಮಾದಿಗರು ಸಹಿತ ಇತರ ಸಮುದಾಯಗಳಿಗೆ ಒಳಮೀಸಲು ಜಾರಿಗೆ ಬದ್ಧವೆಂಬ ಸಂದೇಶ ರವಾನಿಸಲು ಪ್ರಯತ್ನಿಸಿದ್ದಾರೆ.
ಕೆಲವು ಸಚಿವರ ಅಪಸ್ವರ?: ಕಳೆದ ವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಕುರಿತು ಅನೌಪಚಾರಿಕ ಚರ್ಚೆ ನಡೆದಿತ್ತು. ಈ ವೇಳೆ ಕೆಲವು ಸಚಿವರು ಅಪಸ್ವರ ವ್ಯಕ್ತಪಡಿಸಿದ್ದನ್ನು ಸಿಎಂ ಶನಿವಾರದ ಸಭೆಯಲ್ಲಿ ಪ್ರಸ್ತಾಪಿಸಿದರೆಂದು ತಿಳಿದು ಬಂದಿದೆ. ರಾಜ್ಯದಲ್ಲಿ ಚಿನ್ನಪ್ಪರೆಡ್ಡಿ, ಎಲ್.ಜಿ.ಹಾವನೂರು ಆಯೋಗದ ವರದಿ ಅಂಗೀಕಾರ, ರಾಷ್ಟ್ರಮಟ್ಟದಲ್ಲಿ ನ್ಯಾ.ಮಂಡಲ್ ವರದಿ ಜಾರಿ ವೇಳೆಯೂ ವಿರೋಧ ವ್ಯಕ್ತವಾಗಿತ್ತು ಎಂಬುದನ್ನು ಸಚಿವ, ಮಾಜಿ ಸಚಿವರು ನೆನಪಿಸಿದರು. ಯಾವುದೇ ಆಯೋಗದ ವರದಿಯಿರಲಿ, ಬೇಗನೆ ಒಪ್ಪಿತವಾದದ್ದು ವಿರಳ. ಅಪಸ್ವರ ಎತ್ತಿದವರಿಗೆ ವಸ್ತುಸ್ಥಿತಿ ಮನವರಿಕೆ ಮಾಡಿಕೊಡುವಂತೆ ಸಿದ್ದರಾಮಯ್ಯಗೆ ಮುಖಂಡರು ಮನವಿ ಮಾಡಿದರೆಂದು ತಿಳಿದು ಬಂದಿದೆ.
ಹೊಸ ದತ್ತಾಂಶ?: ಮೀಸಲು ಪ್ರಮಾಣ ಶೇ.17ರ ಪ್ರಕಾರ ವಿಂಗಡಿಸಲು ಹೊಸದಾಗಿ ದತ್ತಾಂಶ ಸಂಗ್ರಹಿಸುವ ಅಗತ್ಯದ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಿದೆ. ಶೇ.15ಕ್ಕೆ ಅನುಗುಣವಾಗಿ ವರ್ಗೀಕರಿಸಿ ತ್ವರಿತವಾಗಿ ಜಾರಿಗೊಳಿಸಲು ನ್ಯಾ.ಸದಾಶಿವ ಆಯೋಗದ ವರದಿಯಲ್ಲಿರುವ ದತ್ತಾಂಶಗಳು ಸಾಕು ಎಂಬ ಇಂಗಿತ ವ್ಯಕ್ತವಾಗಿದೆ. ಬಳಸಬಹುದಾದ ದತ್ತಾಂಶಗಳ ಕುರಿತು
ಕಾನೂನು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಜತೆಗೆ ರ್ಚಚಿಸಿ ಸಚಿವ ಸಂಪುಟ ಸಭೆಗೆ ಸೂಕ್ತ ಟಿಪ್ಪಣಿಯೊಂದನ್ನು ಸಿದ್ಧಪಡಿಸಲು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ. ಇದೇ ಸಂದರ್ಭದಲ್ಲಿ ಒಳ ಮೀಸಲು ಜಾರಿಯಾಗುವ ತನಕ ಎಲ್ಲ ನೇಮಕ ರದ್ದುಗೊಳಿಸಬೇಕು ಎಂದು ಮನವಿ ಮಾಡಿ ಕೊಂಡಾಗ ಸಿಎಂ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಚಿವ ಕೆ.ಎಚ್. ಮುನಿಯಪ್ಪ ಸಭೆ ಬಳಿಕ ಹೇಳಿದರು.
ಒಂದು ಹೆಜ್ಜೆ ಮುಂದು: ತೆಲಂಗಾಣ ಸರ್ಕಾರ ಮೀಸಲು ವರ್ಗೀಕರಣ ಸಂಬಂಧ ತಜ್ಞರ ಸಮಿತಿ ರಚಿಸಿದೆ. ಹರಿಯಾಣದಲ್ಲಿ ಮೂರನೇ ಬಾರಿ ಆಡಳಿತದ ಚುಕ್ಕಾಣಿ ಹಿಡಿದ ಬಿಜೆಪಿ, ಮರುದಿನವೇ ಒಳಮೀಸಲಾತಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ವನಿಸಿ, ಅನುಷ್ಠಾನಕ್ಕೆ ತರುವುದಾಗಿ ಪ್ರಕಟಿಸಿದೆ. ತೆಲಂಗಾಣದ ಕಾಂಗ್ರೆಸ್ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದೆ. ಒಳ ಮೀಸಲಾತಿ ಜಾರಿಗೆ ತರುವ ಎಲ್ಲ ಇಲಾಖೆಗಳ ನೇಮಕಾತಿ ಪ್ರಕ್ರಿಯೆಗಳನ್ನು ತಡೆ ಹಿಡಿಯಲಾಗಿದೆ. ರಾಜ್ಯದಲ್ಲಿ ಎಸ್ಸಿ ಒಳಮೀಸಲು ಜಾರಿ ಸಂಬಂಧ ನ್ಯಾ.ಎ.ಜೆ. ಸದಾಶಿವ ಆಯೋಗ ರಚಿಸಿ ವರದಿಯನ್ನೂ ತರಿಸಿಕೊಂಡಾಗಿದೆ. ಕಾಂಗ್ರೆಸ್ ಹೈಕಮಾಂಡ್ ತೆಲಂಗಾಣಕ್ಕೊಂದು, ಕರ್ನಾಟಕಕ್ಕೆ ಮತ್ತೊಂದು ನೀತಿ ಅನ್ವಯಿಸುವಂತೆ ಹೇಳುವುದಿಲ್ಲ ಎನ್ನುವುದು ಶನಿವಾರದ ಸಭೆಯಲ್ಲಿ ಚರ್ಚೆಯಾಗಿದೆ. ಮಾದಿಗ ಸಮುದಾಯದ ಸಚಿವರು, ಮಾಜಿ ಸಚಿವರು, ಶಾಸಕರ ಭಾವನೆಗಳಿಗೆ ಸ್ಪಂದಿಸಿದ ಸಿದ್ದರಾಮಯ್ಯ, ಸುಪ್ರೀಂ ಕೋರ್ಟ್ ಆದೇಶದಂತೆ ಒಳಮೀಸಲು ಜಾರಿಗೆ ತರಲೇ ಬೇಕು, ಸರ್ಕಾರ ಅದಕ್ಕೆ ಬದ್ಧವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಪರಿಶಿಷ್ಟ ಜಾತಿ ಮೀಸಲು ವರ್ಗೀಕರಣ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆಯಾಗಿದೆ. ಸಿಎಂ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿ, ಅ.24ರ ಸಚಿವ ಸಂಪುಟ ಸಭೆಯಲ್ಲಿ ರ್ಚಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಕೆ.ಎಚ್.ಮುನಿಯಪ್ಪ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ
ಎಸ್ಸಿ ಒಳಮೀಸಲಿಗೆ 30 ವರ್ಷಗಳಿಂದ ಹೋರಾಡುತ್ತಿದ್ದೇವೆ. ಅತ್ತಿದ್ದೇವೆ, ಹಸಿದಿದ್ದೇವೆ. ಅತ್ತೂ ಅತ್ತು ಕಣ್ಣೀರು ಬತ್ತಿ ಹೋಗಿ ರಕ್ತ ಹರಿಯುವ ಮುನ್ನ ಬೇಡಿಕೆ ಈಡೇರಿಸಲು ಸಿಎಂ ಸಿದ್ದರಾಮಯ್ಯ ಅವರಿಗೆ ಕೇಳಿಕೊಂಡಿದ್ದೇವೆ, ಜಾರಿ ವಿಶ್ವಾಸವೂ ಇದೆ.
| ಎಚ್. ಆಂಜನೇಯ, ಮಾಜಿ ಸಚಿವ