ಸಿಎಂ ಬೊಮ್ಮಾಯಿ ಕೊನೇ ಸುತ್ತಿನ ಕಸರತ್ತು; ಮತಬೇಟೆ ಜತೆಗೆ ನ್ಯೂನತೆ ಸರಿಪಡಿಸಲು ಆದ್ಯತೆ; ಹಾನಗಲ್, ಸಿಂದಗಿಯಲ್ಲಿ ವಿಭಿನ್ನ ಕಾರ್ಯತಂತ್ರ

Hanagal
ಹಾನಗಲ್ಲ ತಾಲೂಕು ಯಳವಟ್ಟಿ ಗ್ರಾಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಬಹಿರಂಗ ಪ್ರಚಾರ ನಡೆಸಿದರು. ಸಂಸದ ಶಿವಕುಮಾರ ಉದಾಸಿ, ಸಚಿವ ಶಿವರಾಮ ಹೆಬ್ಬಾರ ಇತರರಿದ್ದರು.
Published on

ಬೆಂಗಳೂರು: ಹಾನಗಲ್ ಹಾಗೂ ಸಿಂದಗಿ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಅಭಿವೃದ್ಧಿ ಕಾರ್ಯಸೂಚಿ ಮುಂದಿಟ್ಟುಕೊಂಡು ಆಡಳಿತಾರೂಢ ಭಾರತೀಯ ಜನತಾ ಪಕ್ಷ ಸೆಣಸಾಡುತ್ತಿದೆ. ಕೇಂದ್ರ-ರಾಜ್ಯದಲ್ಲಿ ಅಧಿಕಾರದಲ್ಲಿರುವ ವರ್ಚಸ್ಸು, ಸಂಘಟನಾ ಬಲ ಜತೆಗಿದ್ದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುವಿಲ್ಲದೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ಉಪಸಮರ ಕಮಲ ಪಡೆಗೆ ಪ್ರತಿಷ್ಠೆ ಮಾತ್ರವಲ್ಲ, ವಿವಿಧ ಕಾರಣಗಳಿಗಾಗಿ ಮಹತ್ವ ಪಡೆದಿದೆ. ಪಕ್ಷದ ವರಿಷ್ಠರು ನೀಡಿರುವ ಆದ್ಯತೆ, ಸಚಿವ-ಸಂಸದ-ಶಾಸಕರ ಪಾಲ್ಗೊಳ್ಳುವಿಕೆ ಎಲ್ಲವನ್ನೂ ಸಾರುತ್ತದೆ. ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಸವಾಲು ಹಿಮ್ಮೆಟ್ಟಿಸಿ, ಗೆಲ್ಲಲೇಬೇಕೆಂದು ಪಣ ತೊಟ್ಟಿದ್ದು, ಪ್ರಚಾರದ ಭರಾಟೆ, ಮತದಾರರ ಮನ ಗೆಲ್ಲುವುದಕ್ಕೆ ಅಗತ್ಯವಿರುವ ಅಸ್ತ್ರಗಳನ್ನು ಪ್ರಯೋಗಿಸುತ್ತಿದೆ. ಹಾನಗಲ್ ಕ್ಷೇತ್ರದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಸೋಮವಾರ ರೋಡ್ ಶೋ ಮೂಲಕ ಜನರ ಗಮನಸೆಳೆಯಲು ಪ್ರಯತ್ನಿಸಿದ್ದಾರೆ.

ಕೊನೇ ಸುತ್ತಿನ ಕಸರತ್ತು: ನಾಯಕತ್ವದ ಪರೀಕ್ಷೆ ಎಂದೇ ಬಿಂಬಿತವಾಗಿರವ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕಳೆದ ಕೆಲವು ದಿನಗಳಿಂದ ಹಾನಗಲ್, ಸಿಂದಗಿಯಲ್ಲಿ ಸಂಚರಿಸುತ್ತಿದ್ದಾರೆ. ಬಹಿರಂಗ ಸಭೆ, ರೋಡ್ ಶೋ ಇತ್ಯಾದಿ ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮತಬೇಟೆಗೆ ಬೆವರಿಳಿಸುತ್ತಿದ್ದಾರೆ. ತವರು ಜಿಲ್ಲೆ ಹಾವೇರಿ ವ್ಯಾಪ್ತಿಯಲ್ಲಿರುವ ಹಾನಗಲ್ ಕ್ಷೇತ್ರ ಸಿಎಂ ಪಾಲಿಗೆ ಪ್ರತಿಷ್ಠೆ ಪ್ರಶ್ನೆಯಾಗಿದ್ದು, ಈ ಕ್ಷೇತ್ರದಲ್ಲಿ ಉಳಿದ ಮೂರು ದಿನವೂ ಬಿಡಾರ ಹೂಡಿ ಕೊನೇ ಸುತ್ತಿನ ಕಸರತ್ತು ನಡೆಸಲಿದ್ದಾರೆ.

ಅದೇ ಕಾಲಕ್ಕೆ ಮುನಿಸಿಕೊಂಡ ಮುಖಂಡರು, ವಿವಿಧ ಸಮುದಾಯಗಳ ಓಲೈಕೆಗೂ ಪ್ರಯತ್ನಿಸಿದ್ದಾರೆ. ಆಯಾ ಸಮುದಾಯದ ಮೇಲೆ ಪ್ರಭಾವಬೀರುವ ಮುಖಂಡರ ಜತೆಗೆ ಮುಖಾಮುಖಿ ಚರ್ಚೆ, ಸಿ.ಎಂ.ಉದಾಸಿ ಕ್ಷೇತ್ರಕ್ಕೆ ಮಾಡಿದ ಅಭಿವೃದ್ಧಿ ಕೆಲಸಗಳ ವರದಿ ಒಪ್ಪಿಸುತ್ತಿದ್ದಾರೆ. ಪಕ್ಷದ ಅಭ್ಯರ್ಥಿ ಶಿವರಾಜ ಸಜ್ಜನರ್​ಗೆ ಪೂರಕ ವಾತಾವರಣ ಸೃಷ್ಟಿಸಲು ಪಕ್ಷದೊಳಗಿನ ನ್ಯೂನತೆ ಸರಿಪಡಿಸಲು ಅಷ್ಟೇ ಆದ್ಯತೆ ನೀಡಿದ್ದಾರೆ ಎಂದು ಮೂಲಗಳು ವಿವರಿಸಿವೆ.

ವಿಭಿನ್ನ ಕಾರ್ಯತಂತ್ರ: ಹಾನಗಲ್ ಹಾಗೂ ಸಿಂದಗಿ ಕ್ಷೇತ್ರದ ಸಾಮಾಜಿಕ ಸಂರಚನೆ ಬೇರೆಯಾಗಿರುವ ಕಾರಣ ಅದಕ್ಕೆ ತಕ್ಕಂತೆ ವಿಭಿನ್ನವಾದ ಕಾರ್ಯತಂತ್ರವನ್ನು ಪಕ್ಷ ರೂಪಿಸಿ, ಅನುಷ್ಠಾನಕ್ಕೆ ತಂದಿದೆ. ಹಾನಗಲ್​ನ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಮರಾಠ ಸಮುದಾಯಕ್ಕೆ ಸೇರಿದ್ದು, ಜೆಡಿಎಸ್​ನಿಂದ ನಿಯಾಜ್ ಶೇಖ್ ಸ್ಪರ್ಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಮುಸ್ಲಿಮರು ನಿರ್ಣಾಯಕರಾಗಿದ್ದು, ಕದನ ಕುತೂಹಲ ಕೆರಳಿಸಿದೆ.

ಸಿಂದಗಿಯಲ್ಲಿ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳಿಬ್ಬರೂ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿರುವುದು ತುರುಸು ಹೆಚ್ಚಿಸಿದೆ. ಜೆಡಿಎಸ್​ನಿಂದ ನಯಾಜ್ ಶಕೀಲ್ ಅಂಗಡಿ ಅಖಾಡಕ್ಕೆ ಇಳಿದು, ನಿಗೂಢ ಹೊಡೆತದ ಭೀತಿ ಹುಟ್ಟಿಸಿದ್ದಾರೆ. ಉಪ ಕದನದಲ್ಲಿ ಅಧಿಕಾರದಲ್ಲಿರುವ ಪಕ್ಷ ಮೇಲುಗೈ ಸಾಧಿಸಿದ ನಿದರ್ಶನಗಳಿವೆ. ಆದರೂ ಕಮಲ ಪಡೆ ನಾಯಕರು ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ವಿವಿಧ ಯೋಜನೆಗಳ ಭರವಸೆ, ಅಭಿವೃದ್ಧಿಗಿಂತ ಮುಖ್ಯವಾಗಿ ಜಾತಿವಾರು ಲೆಕ್ಕಾಚಾರದಲ್ಲಿ ಸಚಿವರು, ಸಂಸದ, ಶಾಸಕರು ಮತ್ತು ರಾಜ್ಯಮಟ್ಟದ ಪದಾಧಿಕಾರಿಗಳಿಗೆ ಜವಾಬ್ದಾರಿ ಹಂಚಿದೆ. ಸಿಂದಗಿಯಲ್ಲಿ ರಮೇಶ್ ಭೂಸನೂರು ಗೆಲುವಿಗಾಗಿ ಸಚಿವರ ತಂಡ ಬೀಡುಬಿಟ್ಟಿದ್ದು, ಬೊಮ್ಮಾಯಿ ಪ್ರಚಾರದ ಹೆಸರಿನಲ್ಲಿ ಆಗಾಗ್ಗೆ ಭೇಟಿಯಿತ್ತು ಆಂತರಿಕ ಸಮಸ್ಯೆ ಬಗೆಹರಿಸಿದ್ದಾರೆ.

ಯಡಿಯೂರಪ್ಪ ಮತ್ತೆ ಪ್ರಚಾರ ಕಣಕ್ಕೆ

ಬಸವರಾಜ ಬೊಮ್ಮಾಯಿ ಜತೆಯಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡಿರುವುದು ಕಾರ್ಯಕರ್ತರಲ್ಲಿ ಹುರುಪು ಹೆಚ್ಚಿಸಿದೆ. ಎರಡೂ ಕಡೆ ಪಕ್ಷದ ಪರ ಬಲವಾದ ಅಲೆ ಎದ್ದಿದೆ ಎಂದು ಮುಖಂಡರು ವಿಶ್ವಾಸದಲ್ಲಿದ್ದು, ವರಿಷ್ಠರ ಅಪೇಕ್ಷೆಯಂತೆ ಬಿಎಸ್​ವೈ ಮತ್ತೊಮ್ಮೆ ಪ್ರಚಾರದ ಅಖಾಡಕ್ಕೆ ಧುಮುಕಲಿದ್ದಾರೆ. ಬಹಿರಂಗ ಪ್ರಚಾರದ ಕೊನೆಯ ದಿನ (ಅ.27) ಹಾನಗಲ್​ನಲ್ಲಿ ಬಿಎಸ್​ವೈ ಮತ್ತು ಬೊಮ್ಮಾಯಿ ಭರ್ಜರಿ ರೋಡ್ ಶೋಗೆ ಪಕ್ಷ ಭರ್ಜರಿ ಸಿದ್ಧತೆ ನಡೆಸಿದ್ದು, ರಣಾಂಗಣ ಮತ್ತಷ್ಟು ರೋಚಕವಾಗುವ ಸಾಧ್ಯತೆಗಳಿವೆ.

ಉಪ ಚುನಾವಣೆ ವೇಳೆ ಎಲ್ಲೂ ಹೋಗಿಲ್ಲ. ಒಂದು ದಿನ ಮಾತ್ರ ಸಿಂದಗಿಗೆ ಹೋಗಿದ್ದೆ. ಜೆಡಿಎಸ್​ನಿಂದ ಅಲ್ಪಸಂಖ್ಯಾತ ಹೆಣ್ಣು ಮಗಳನ್ನು ಕಣಕ್ಕಿಳಿಸಿದ್ದೇವೆ. 45 ವರ್ಷಗಳ ರಾಜಕೀಯ ಜೀವನದಲ್ಲಿ ಹಲವಾರು ನೀರಾವರಿ ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ಕೊನೇ ಗಳಿಗೆವರೆಗೂ ನಾನು ಮಾಡಿದ ಕೆಲಸಕ್ಕೆ ಕೂಲಿ ಕೊಡಿ ಎಂದು ಜನರಲ್ಲಿ ಮನವಿ ಮಾಡುತ್ತೇನೆ.| ಎಚ್.ಡಿ.ದೇವೇಗೌಡ ಮಾಜಿ ಪ್ರಧಾನಿಪಂಜಾಬ್​ನಲ್ಲೊಬ್ಬ, ರಾಜ್ಯದಲ್ಲೊಬ್ಬ ಸಿದ್ದು ಇದ್ದಾರೆ. ಇಬ್ಬರೂ ಸಿದ್ದುಗಳ ಜಟಾಪಟಿಯಿಂದ ಕಾಂಗ್ರೆಸ್ ಅವನತಿಯತ್ತ ಸಾಗಿದೆ. ಪಂಜಾಬ್​ನಲ್ಲಿ ಕಾಂಗ್ರೆಸ್ ನಗೆಪಾಟಲಿಗೆ ಈಡಾಗಿದೆ. ಕರ್ನಾಟಕ ದಲ್ಲೂ ಅದೇ ಪರಿಸ್ಥಿತಿಯಿದೆ.| ಜಗದೀಶ ಶೆಟ್ಟರ್ ಮಾಜಿ ಸಿಎಂ

ಎರಡೂ ಕಡೆ ಕಮಲ ಅರಳಲಿದೆ

ಹಾವೇರಿ: ಹಾನಗಲ್ ಹಾಗೂ ಸಿಂದಗಿಯಲ್ಲಿ ಬಿಜೆಪಿ ಪರ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಶತಸಿದ್ಧ. ಮಂಗಳವಾರ, ಬುಧವಾರವೂ ಹಾನಗಲ್​ನಲ್ಲಿ ಪ್ರಚಾರ ನಡೆಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಎಲ್ಲ ಸಮುದಾಯ ಹಾಗೂ ವರ್ಗಗಳ ಜನರು ಬಿಜೆಪಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಸಾಮಾಜಿಕ ಸಮೀಕರಣವಾಗಿದೆ. ಇದು ಬಿಜೆಪಿ ಪರವಾಗಿದ್ದು, ಶಿವರಾಜ ಸಜ್ಜನರ ಅತಿದೊಡ್ಡ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕ್ಷೇತ್ರಕ್ಕೆ ಬಂದು ಹೋದ ನಂತರ ಜನರಿಂದ ಹೆಚ್ಚಿನ ಬೆಂಬಲ ದೊರೆಯುತ್ತಿದೆ. ಸಿಂದಗಿಯಲ್ಲಿಯೂ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ರಮೇಶ ಬೂಸನೂರು ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದರು.

ನಾನೂ ಕುರಿ ಕಾದಿದ್ದೇನೆ...

ನಾನೂ ಬಂಕಾಪುರದಲ್ಲಿ ಕುರಿ ಕಾದಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ. ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಮುಳುಗುತ್ತಿದೆ. ಅ.30ರಂದು ಬಿಜೆಪಿಗೆ ಮತ ಹಾಕಿದರೆ ಇಲ್ಲಿಯೂ ಕಾಂಗ್ರೆಸ್ ಮುಳುಗುತ್ತದೆ. ಸಿಂದಗಿಯಲ್ಲಿ ಹಾಕಿದ್ದ ಕಂಬಳಿಯ ಗೌರವ ಕಾಪಾಡಿಕೊಳ್ಳುತ್ತೇನೆ ಎಂದು ಹೇಳಿದ್ದೆ, ಹೊರತು ಯಾರ ಹೆಸರನ್ನೂ ಪ್ರಸ್ತಾಪಿಸಿರಲಿಲ್ಲ. ಆದರೆ ಅದು ಸಿದ್ದರಾಮಯ್ಯರಿಗೆ ಚುರುಕು ಮುಟ್ಟಿಸಿದೆ. ಅದಕ್ಕೆ ಅವರು ಬೊಮ್ಮಾಯಿ ಕುರಿ ಕಾದಿದ್ರಾ ಎಂದು ಪ್ರಶ್ನಿಸಿದ್ದಾರೆ. ನಿಸ್ಸಂದೇಹ ನಾನೂ ಕುರಿ ಕಾದಿದ್ದೇನೆ ಎಂದರು.

ಬಿಜೆಪಿ ಬಳಿ ಹಾನಗಲ್, ಸಿಂದಗಿಗೆ ಅಜೆಂಡಾ ಇಲ್ಲ. ಎರಡೂ ಕಡೆ ಹಣ ಹಂಚುತ್ತಿದೆ. ಬಿಜೆಪಿ ಬೆಂಬಲಕ್ಕೆ ಯಾವ ಪಕ್ಷ ಇದೆ ಅಂತ ರಾಜ್ಯದ ಜನತೆಗೆ ಗೊತ್ತಿದೆ. ಬಿಜೆಪಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ. ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್​ಗೆ ಗೆಲುವು ಸಿಗಲಿದೆ. ಎರಡೂ ಕಡೆಯ ಜನ ಬದಲಾವಣೆ ಬಯಸಿದ್ದಾರೆ.| ರಂದೀಪ್ ಸಿಂಗ್ ಸುರ್ಜೆವಾಲಾಎಐಸಿಸಿ ರಾಜ್ಯ ಉಸ್ತುವಾರಿ ಕುರಿಗಾಯಿಗಳ ವೋಟಿನ ಬೇಟೆಗಾಗಿ ಕಂಬಳಿ ಹೊದ್ದು ಚುನಾವಣಾ ಪ್ರಚಾರ ನಡೆಸಿದ ಮುಖ್ಯಮಂತ್ರಿ ಬೊಮ್ಮಾಯಿ ಅವರೇ, ಈ ನಾಟಕ ನಿಲ್ಲಿಸಿ. ನಾನು ಜಾರಿಗೆ ತಂದಿದ್ದ ‘ಅನುಗ್ರಹ’ ಯೋಜನೆ ಸ್ಥಗಿತಗೊಳಿಸಿದ್ದ ಬಿಜೆಪಿ ಸರ್ಕಾರವನ್ನು ಕಟುಕರ ಸರ್ಕಾರ ಎನ್ನದೆ ಬೇರೆ ಹೇಗೆ ಕರೆಯೋಣ?| ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕ

ವಿಧಾನಸೌಧಕ್ಕೆ ಬೀಗ ಹಾಕಲಾಗಿದೆ!

ಬೆಂಗಳೂರು: ಈಗಾಗಲೆ ವಿಧಾನಸೌಧಕ್ಕೆ ಬೀಗ ಹಾಕಲಾಗಿದ್ದು, ಅಲ್ಲಿ ಒಬ್ಬ ಮಂತ್ರಿಯೂ ಇಲ್ಲ. ಜನ ಪರದಾಡುವಂತಾಗಿದೆ. ಮಂತ್ರಿಗಳು ಅಧಿಕಾರಿಗಳ ಜತೆ ಸಭೆ ನಡೆಸುತ್ತಿಲ್ಲ. ರಾಜ್ಯದ ಜನರ ಬಗ್ಗೆ ಅವರಿಗೆ ಕಾಳಜಿ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಮುಖ್ಯಮಂತ್ರಿ ಆದವರು ಉಪಚುನಾವಣೆ ಸಂದರ್ಭದಲ್ಲಿ 1-2 ಬಾರಿ ಪ್ರಚಾರ ಮಾಡೋದು ಸಾಮಾನ್ಯ. ಇವರು ಅಲ್ಲೇ ಕೂತಿದ್ದಾರೆ ಎಂದರೆ ಎಷ್ಟರಮಟ್ಟಿಗೆ ಅವರಿಗೆ ಭಯ ಉಂಟಾಗಿದೆ ಎಂಬುದು ಸ್ಪಷ್ಟವಾಗುತ್ತಿದೆಯಲ್ಲವೇ? ಎಂದರು. ಹಾನಗಲ್ ಹಾಗೂ ಸಿಂದಗಿಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಜನ ಕಾಂಗ್ರೆಸ್ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶಾಂತ ರೀತಿಯಲ್ಲಿ ಮತದಾನ ನಡೆಯುವುದಷ್ಟೇ ಬಾಕಿ ಎಂದ ಡಿಕೆಶಿ, ಈಗಾಗಲೆ ಸಾಕಷ್ಟು ಅಧಿಕಾರ ದುರುಪಯೋಗವಾಗುತ್ತಿದೆ. ಜನ ಪ್ರಜ್ಞಾವಂತರಿದ್ದು, ಇದನ್ನು ಗಮನಿಸುತ್ತಿದ್ದಾರೆ ಎಂದರು.

ಶಕ್ತಿಸೌಧ ಖಾಲಿ: ಸೋಮವಾರ ವಿಧಾನಸೌಧ ಬಣಗುಡುತ್ತಿತ್ತು. ಸಚಿವ ಸಂಪುಟ ಸದಸ್ಯರಲ್ಲಿ ಬಹುತೇಕರು ಸಿಂದಗಿ, ಹಾನಗಲ್ ಚುನಾವಣೆ ಪ್ರಚಾರದಲ್ಲಿದ್ದ ಕಾರಣ ಒಬ್ಬರೇ ಒಬ್ಬ ಸಚಿವರು ಕಾಣಿಸಲಿಲ್ಲ. ಇದರಿಂದ ಸಚಿವರನ್ನು ಭೇಟಿಯಾಗಲು ವಿಧಾನಸೌಧಕ್ಕೆ ಬಂದಿದ್ದ ಸಾರ್ವಜನಿಕರು ಬರಿಗೈಯಲ್ಲಿ ವಾಪಸಾದರು.

ರೀ ಸ್ವಾಮಿ... ಬೀಗ ಹಾಕಿಲ್ಲಾರಿ: ಸಚಿವ ಸಂಪುಟದಲ್ಲಿ ಒಗ್ಗಟ್ಟಿದೆ. ಹೀಗಾಗಿ ಎಲ್ಲ ಸಚಿವರು 2-3 ದಿನಗಳ ಕಾಲ ಪ್ರಚಾರಕ್ಕೆ ಬಂದು ಹೋಗುತ್ತಿ ದ್ದಾರೆ. ರೀ ಸ್ವಾಮಿ... ನಾವು ವಿಧಾನಸೌಧಕ್ಕೆ ಬೀಗ ಹಾಕಿಲ್ಲ. ಎಲ್ಲ ಕೆಲಸ ಕಾರ್ಯಗಳು ಎಂದಿನಂತೆ ನಡೆಯುತ್ತಿವೆ. ಸಚಿವರು ನಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಿದರೆ ಕಾಂಗ್ರೆಸ್ ನಾಯಕರಿಗೆ ಯಾಕೆ ಆತಂಕ ಆಗಬೇಕು ಎಂದು ಹಾವೇರಿಯಲ್ಲಿ ಪ್ರಶ್ನಿಸಿದ ಸಿಎಂ ಬಸವರಾಜ ಬೊಮ್ಮಾಯಿ, ‘ಯಾವುದೇ ಸರ್ಕಾರಿ ಕೆಲಸ ನಿಂತಿಲ್ಲ’ ಎಂದು ವಿಜಯಪುರದಲ್ಲಿ ಪ್ರತಿಕ್ರಿಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net