ಆರ್ಥಿಕ ಬಲ ಖಾತ್ರಿಪಡಿಸಿಕೊಂಡ ಸಿಎಂ | Funds for development

CM Siddaramaiah
Published on

ಬೆಂಗಳೂರು: ಸ್ವಪಕ್ಷದ ಶಾಸಕರ ಅಸಮಾಧಾನ, ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ನಿವಾರಣೆಗೆ ಪ್ರತಿ ಕ್ಷೇತ್ರಕ್ಕೆ ತಲಾ 50 ಕೋಟಿ ರೂ. ಅನುದಾನವನ್ನು ಸಿಎಂ ಸಿದ್ದರಾಮಯ್ಯ ಪ್ರಕಟಿಸಿದರು. ನಂತರ ಆರ್ಥಿಕ ಪರಿಸ್ಥಿತಿಯ ಮಾಹಿತಿ ಪಡೆದು ಸಮಾಧಾನದ ನಿಟ್ಟುಸಿರು ಬಿಟ್ಟರು.

ಶಾಸಕರೊಂದಿಗೆ ನಾಲ್ಕು ದಿನಗಳ ಸರಣಿಗೆ ಮುನ್ನ ಶಕ್ತಿ ಭವನದಲ್ಲಿ ಹಣಕಾಸು ಇಲಾಖೆ ಅಧಿಕಾರಿಗಳ ಜತೆಗೆ ಮಂಗಳವಾರ ಪೂರ್ವಭಾವಿ ತಾಲೀಮು ನಡೆಸಿದರು. ಮೊದಲ ತ್ರೈಮಾಸಿಕ (ಏಪ್ರಿಲ್-ಜೂನ್)ದಲ್ಲಿ ಸ್ವಂತ ಮೂಲಗಳಿಂದ ಶೇ.23ರಷ್ಟು ತೆರಿಗೆ ಸಂಗ್ರಹವಾಗಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಗುರಿಗೆ ಹೋಲಿಸಿದರೆ ಶೇ.2ರಷ್ಟು ಕಡಿಮೆಯಿದ್ದು, ಸ್ವಾಭಾವಿಕ ಅಂಶವಾಗಿದೆ. ಬಜೆಟ್‌ನಲ್ಲಿ ಪ್ರಕಟಿಸಿದ ‘ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆ’ ಜಾರಿ, ಮೀಸಲಿಟ್ಟ ಎಂಟು ಸಾವಿರ ಕೋಟಿ ರೂ. ಅನುದಾನವನ್ನು ಶಾಸಕರ ಕ್ಷೇತ್ರಾವಾರು ಹಂಚಿಕೆಗೆ ಅಡ್ಡಿಯಿಲ್ಲವೆಂಬ ಗ್ರೀನ್ ಸಿಗ್ನಲ್ ನೀಡಿದರು ಎನ್ನಲಾಗಿದೆ.

ಹೆಚ್ಚುವರಿಗೆ ಹೆಚ್ಚು ಗಮನ

ಪ್ರತಿ ಹಣಕಾಸು ವರ್ಷದ ಆರಂಭಿಕ ವರ್ಷ ಸ್ವಲ್ಪ ಮಂದವಾಗಿರುತ್ತದೆ. ಎರಡನೇ ತ್ರೈಮಾಸಿಕದಲ್ಲಿ ಚೇತರಿಕೆ, ಮತ್ತೆ ನಿಧಾನ, ಕೊನೆಯ ತ್ರೈಮಾಸಿಕದಲ್ಲಿ ವೇಗ ಪಡೆಯುತ್ತದೆ. ಸೋರಿಕೆ ತಡೆ, ಹೆಚ್ಚುವರಿ ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸಲು ಸಿಎಂ ಸಿದ್ದರಾಮಯ್ಯ ಸೂಚಿಸಿದರು ಎನ್ನಲಾಗಿದೆ.

ಮೊದಲ ತ್ರೈಮಾಸಿಕದಲ್ಲಿ ಜಿಎಸ್‌ಟಿ 26,050 ಕೋಟಿ ರೂ., ಅಬಕಾರಿ ಒಂಭತ್ತು ಸಾವಿರ ಕೋಟಿ ರೂ., ನೋಂದಣಿ ಮತ್ತು ಮುದ್ರಾಂಕ ಐದು ಸಾವಿರ ಕೋಟಿ ರೂ., ಸಾರಿಗೆ ಮೂರು ಸಾವಿರ ಕೋಟಿ ರೂ. ತೆರಿಗೆ ಸಂಗ್ರಹವಾಗಿದ್ದು, ಸರಾಸರಿ ಶೇ.22.67ರಷ್ಟು ಪ್ರಗತಿಯಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಎಲ್ಲ 224 ಶಾಸಕರಿಗೆ ಹಂಚುವುದಾದರೆ ಎಂಟು ಸಾವಿರ ಕೋಟಿ ರೂ. ಬೇಕಾಗುತ್ತದೆ. ಸದ್ಯಕ್ಕೆ ಆಡಳಿತ ಪಕ್ಷದ ಶಾಸಕರೊಂದಿಗೆ ಸಿಎಂ ಸಭೆ ನಡೆಸುತ್ತಿದ್ದಾರೆ. ಹೀಗಾಗಿ 6,800 ಕೋಟಿ ರೂ. ಸಾಕಾಗಲಿದೆ. ಟೆಂಡರ್ ಪ್ರಕ್ರಿಯೆ, ಕೆಲಸದ ಆದೇಶ, ಕಾಮಗಾರಿ ಮುಗಿದು ಪಾವತಿಗೆ ಬಿಲ್ ಸಲ್ಲಿಕೆ ವೇಳೆ ಆಗಸ್ಟ್ ಕೊನೆಗೊಳ್ಳಲಿದ್ದು, ತೆರಿಗೆ ಸಂಗ್ರಹ ಮತ್ತಷ್ಟು ಹೆಚ್ಚಿರಲಿದೆ ಎನ್ನುವುದು ಸರ್ಕಾರದ ಲೆಕ್ಕಾಚಾರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net