ಹೆದರಿಕೆ ಅನ್ನೋದು ಸಿಎಂ ಅವರ ರಕ್ತದಲ್ಲೇ ಇಲ್ಲ: ಡಿಕೆಶಿ

ವಿಜಯವಾಣಿ - 2024-08-20T144518.085
Published on

ಕಲಬುರ್ಗಿ: ಮುಡಾ ಪ್ರಕರಣದಲ್ಲಿ ಸತ್ಯಕ್ಕೆ ಜಯ ಸಿಗಲಿದೆ ಎಂದ ಡಿಸಿಎಂ ಡಿಕೆ. ಶಿವಕುಮಾರ್​, ಸಿಎಂ ಸಿದ್ದರಾಮಯ್ಯ ಅವರು ಯಾವ ತಪ್ಪು ಮಾಡಿಲ್ಲ. ಸಿದ್ದು ಅವರು ಹೆದರಿಲ್ಲ, ಹೆದರೋದು ಇಲ್ಲ. ಭಯ ಅನ್ನೋದು ಅವರ ರಕ್ತದಲ್ಲೇ ಇಲ್ಲ ಎಂದ ಡಿಕೆಶಿ, ಬಿಜೆಪಿ ನಾಯಕರ ಸರಣಿ ಆರೋಪಗಳ ಬೆನ್ನಲ್ಲೇ ಮುಖ್ಯಮಂತ್ರಿಗಳ ಪರ ಬ್ಯಾಟ್ ಬೀಸಿದ್ದಾರೆ.

ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್​, "40 ವರ್ಷ ಇಂತಹ ಎಷ್ಟೋ ರಾಜಕಾರಣ ನೋಡಿದ್ದಾರೆ. ಹೆದರಿಕೆ ಅನ್ನೋದು ಅವರಿಗಿಲ್ಲ. ಹೆದರೋದು ಸಿದ್ದರಾಮಯ್ಯ ಅವರಲ್ಲಿ ಇಲ್ಲವೇ ಇಲ್ಲ. ಸತ್ಯಕ್ಕೆ ಯಾವತ್ತಿಗೂ ಜಯ ಸಿಗುತ್ತದೆ. ನಮ್ಮ ಸಿಎಂ ಯಾವ ತಪ್ಪು ಮಾಡಿಲ್ಲ. ಗೆಹ್ಲೋಟ್ ಅವರನ್ನು ಆ ಹುದ್ದೆಯಲ್ಲಿ ಕುರಿಸಿದ್ದು ಸಂವಿಧಾನ, ಜಾತಿಯಲ್ಲ. ಬಿಜೆಪಿಗರದ್ದು ಅನಗತ್ಯ ವಿವಾದ" ಎಂದರು.

"ಸಿಎಂ ಅವರಿಗೆ ಖರ್ಗೆಯವರಿಂದ ಹಿಡಿದು, ಸಚಿವರು, ಶಾಸಕರು ಎಲ್ಲರ ಬೆಂಬಲವಿದೆ. ರಾಜ್ಯದಲ್ಲಿ ಹತ್ತು ವರ್ಷ ನಮ್ಮದೆ ಸರ್ಕಾರ ಇರುತ್ತೆ ಅದರಲ್ಲಿ ಅನುಮಾನವೇ ಬೇಡ. ವಿಶೇಷವಾಗಿ ಸಿ.ಟಿ. ರವಿಗೆಂದು ಕಲಬುರಗಿಯಲ್ಲಿ ಹೊಸ ಆಸ್ಪತ್ರೆಯಾಗಿದೆ. ಅಲ್ಲಿಗೆ ಅವರನ್ನು ಸೇರಿಸಬೇಕು. ಪಾಪ ಅವರಿಗೆ ವಿವೇಚನ ಕಳೆದು ಹೋಗಿದೆ. ದೇಶದ ಅನೇಕ ಕಡೆ ರಾಜ್ಯಪಾಲರ ಹಸ್ತಕ್ಷೇಪ ನಡೆಯುತ್ತಿದೆ. ಮಾಧ್ಯಮದವರೇ ದೇಶದ ಯಾವ ರಾಜ್ಯದಲ್ಲಿ ಏನು ನಡೆಯುತ್ತಿದೆಯೋ ಅದೆಲ್ಲವನ್ನೂ ಬಹಿರಂಗವಾಗಿ ತೋರಿಸುತ್ತಿದ್ದೀರಿ" ಎಂದು ಹೇಳಿದರು.

"ಸಿಎಂ ಅವರು ದೆಹಲಿ ಹೋಗಲೇಬೇಕಲ್ವಾ? ಹೈಕಮಾಂಡ್​ಗೆ ಎಲ್ಲಾ ಮಾಹಿತಿ ನೀಡಬೇಕು. ಅದಕ್ಕಾಗಿ ದಿಢೀರನೆ ದೆಹಲಿಗೆ ಹೋಗಿ ಬಂದಿದ್ದಾರೆ ಅಷ್ಟೇ" ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net