ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯಲು ಸಿಎಂಗೆ ಧೈರ್ಯ ಇಲ್ಲ- ಛಲವಾದಿ | Chalavadi challenges CM

chalavadi narayanaswamy
Published on

ಬೆಂಗಳೂರು: ಸಚಿನ್ ಬರೆದಿಟ್ಟ ಏಳು ಪುಟಗಳ ಡೆತ್ ನೋಟಿನಲ್ಲಿ 2-3 ಬಾರಿ ಪ್ರಿಯಾಂಕ್ ಖರ್ಗೆಯವರ ಹೆಸರು ಪ್ರಸ್ತಾಪವಾಗಿದೆ. ಜೊತೆಗೆ ಎಫ್‍ಎಸ್‍ಎಲ್ ವರದಿಯಲ್ಲೂ ಡೆತ್ ನೋಟ್ ಅಸಲಿ ಎಂದು ದೃಢಪಟ್ಟಿದೆ. ದಾಖಲೆ ಕೊಡಿ ಎಂದರೆ ಇನ್ನೇನು ದಾಖಲೆ ಬೇಕು?  ಎಂದು ಸಿಎಂ ಸಿದ್ದರಾಮಯ್ಯಗೆ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.

ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಬುಧವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ದಾಖಲೆ ಇಲ್ಲದ ಕಾರಣ ಸಚಿವ ಸ್ಥಾನದಿಂದ ಕೈಬಿಡುವ ವಿಚಾರ ಉದ್ಭವಿಸುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಮುಖ್ಯಮಂತ್ರಿಗಳೇ ಇದು ನಮಗೆ ಮೊದಲೇ ಗೊತ್ತಿದೆ. ನಿಮಗೆ ಧೈರ್ಯ ಇಲ್ಲ ಎಂಬುದು ನಮಗೆ ಗೊತ್ತಿದೆ ಎಂದು ಟೀಕಿಸಿದರು.

ಆ ಸಚಿವರ ತಂದೆಯವರು ಎಐಸಿಸಿ ಅಧ್ಯಕ್ಷರು. ನೀವು ಇದಕ್ಕೆ ಕೈ ಹಾಕಿದರೆ ಅವರು ನಿಮ್ಮ ಬುಡಕ್ಕೆ ಕೈ ಹಾಕುವ ಭಯ ನಿಮಗಿದೆ. ನೀವು ಕುರ್ಚಿಗೆ ಅಂಟಿ ಕುಳಿತವರು. ಇಷ್ಟೊತ್ತಿಗೆ ನೀವು ಅವರನ್ನು ವಜಾ ಮಾಡಬೇಕಿತ್ತು. ರಾಜೀನಾಮೆ ಪಡೆಯಬೇಕಾಗಿತ್ತು. ಬೇರೆ ಸರ್ಕಾರವಿದ್ದಾಗ ಸ್ವಲ್ಪ ಬಂದರೂ ಬೀದಿಗಿಳಿದು ಬೆಂಕಿ ಹಚ್ಚುತ್ತೀರಲ್ಲವೇ? ಈಗ ನಿಮ್ಮನ್ನು ತಡೆದೋರ್ಯಾರು ಎಂದು ಕೇಳಿದರು.

ತಾಕತ್ತಿಲ್ಲವೆಂದು ಒಪ್ಪಿಕೊಳ್ಳಿ

ಬೇರೆಯವರಿಗೆ ಒಂದು ನ್ಯಾಯ, ನಿಮಗೆ ಒಂದು ನ್ಯಾಯ ಇದೆಯೇ? ಇಷ್ಟೊತ್ತಿಗೆ ನೀವು ಅವರನ್ನು ಸಂಪುಟದಿಂದ ವಜಾ ಮಾಡಬೇಕಿತ್ತು. ನಿಮಗೆ ತಾಕತ್ತಿಲ್ಲವೆಂದು ನೇರವಾಗಿ ಒಪ್ಪಿಕೊಳ್ಳಿ ಎಂದು ಆಗ್ರಹವನ್ನು ಮುಂದಿಟ್ಟರು. ಗೋಡೆ ಮೇಲೆ ದೀಪ ಇಡುವ ಕೆಲಸ ಮಾಡಬೇಡಿ ಎಂದು ಕಿವಿಮಾತು ಹೇಳಿದರು.

ನಾವು ಯಾವುದೇ ಕಾರಣಕ್ಕೆ ಈ ಹೋರಾಟವನ್ನು ಕೈಬಿಡುವುದಿಲ್ಲ. ಅದು ಬೀದರ್, ಗುಲ್ಬರ್ಗಕ್ಕೆ ಸೀಮಿತವಾಗಿತ್ತು. ನಿಮ್ಮ ಉದ್ಧಟತನದಿಂದ ನೀವು ಮಾಡುತ್ತಿರುವ ಈ ಕಾರ್ಯದಿಂದ ಇಡೀ ರಾಜ್ಯ, ದೇಶಕ್ಕೆ ಈ ಸಮಸ್ಯೆ ದೊಡ್ಡದಾಗಿ ಉದ್ಭವಿಸಿದೆ ಎಂದು ಎಚ್ಚರಿಸಿದರು.

ಯಾವುದೇ ಕಾರಣಕ್ಕೂ ನಾವು ನಮ್ಮ ಬಟ್ಟೆ ಹರಿದುಕೊಳ್ಳುವುದಿಲ್ಲ. ಅವರವರ ಬಟ್ಟೆ ಹರಿದುಕೊಳ್ಳುವವರನ್ನು ಹುಚ್ಚರು ಎನ್ನುತ್ತಾರೆ ಎಂದು ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net