ಸಿಎಂ, ಡಿಸಿಎಂಗೆ ಆತಂಕ: ವಿಜಯೇಂದ್ರ ಟೀಕೆ | Dharamasthala case twist

B.Y.Vijayendra
Published on

ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ವಿಷಯದಲ್ಲಿ ದೂರುದಾರನಿಗೆ ಮಾಸ್ಕ್ ಹಾಕಿಸಿದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಇದೀಗ ತಾವೇ ಮುಖವಾಡ ಹಾಕಿ ಓಡಾಡುವ ಪರಿಸ್ಥಿತಿ ಬಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ವಿಶ್ಲೇಷಿಸಿದ್ದಾರೆ.

ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಗುಂಡಿಗಳಲ್ಲಿ ಏನೂ ಸಿಕ್ಕದೇ ಈಗ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರು ಆತಂಕದಲ್ಲಿದ್ದಾರೆ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ದೂರುದಾರನಿಗೆ ಮುಖವಾಡ ಹಾಕುವ ನಿರ್ಧಾರ ಮಾಡಿದ್ದರು. ದೂರುದಾರನ ಮುಖವಾಡವೂ ಕಳಚಿಬಿದ್ದಿದೆ ಎಂದರು.

ಧರ್ಮಸ್ಥಳದ ವಿಚಾರವಾಗಿ ಬಿಜೆಪಿ ನಮ್ಮ ಹೋರಾಟವನ್ನು ಈಗಾಗಲೇ ಘೋಷಿಸಿದೆ; ‘ಧರ್ಮ ರಕ್ಷಣೆಗಾಗಿ ಧರ್ಮ ಯುದ್ಧ’ ನಡೆಸಲಿದ್ದೇವೆ ಎಂದರು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು, ರಾಜ್ಯ ಸರಕಾರದ ಪರಿಸ್ಥಿತಿ ಎಲ್ಲಿಗೆ ಬಂದು ನಿಂತಿದೆ ಎಂದರೆ, ಪಾಪ ಸಿದ್ದರಾಮಯ್ಯನವರು ಯಾರೋ ಎಡಪಂಥೀಯ ಶಕ್ತಿಗಳ ಒತ್ತಡಕ್ಕೆ ಮಣಿದು ಧರ್ಮಸ್ಥಳದಲ್ಲಿ ಎಸ್‍ಐಟಿ ತನಿಖೆಗೆ ಆದೇಶಿಸಿದರು.

ನಾವೂ ಅದನ್ನು ಸ್ವಾಗತ ಮಾಡಿದ್ದೆವು. ಗುಂಡಿ ಬಗೆದಂತೆ ಏನೋ ಸಿಕ್ಕುವುದಾಗಿ ವಿಧಾನಸೌಧದಲ್ಲಿ ಕುಳಿತು ಸಿದ್ದರಾಮಯ್ಯನವರು ಕನಸು ಕಾಣುತ್ತಿದ್ದರು. 15- 16 ಗುಂಡಿ ತೋಡಿದರೂ ಧರ್ಮಸ್ಥಳದಲ್ಲಿ ಏನೂ ಸಿಕ್ಕಿಲ್ಲ ಎಂದು ವಿವರಿಸಿದರು.

ದುಷ್ಟಶಕ್ತಿಗಳ ವಿರುದ್ಧ ಕ್ರಮವಿಲ್ಲ

ಹಿಂದು ಧಾರ್ಮಿಕ ಭಾವನೆಗೆ ಧಕ್ಕೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅವಿವೇಕತನದಿಂದ ನಡೆದುಕೊಳ್ಳುತ್ತಿದೆ. ಆ ದೂರುದಾರ, ಆತನ ಹಿಂದಿರುವ ದುಷ್ಟ ಶಕ್ತಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಶ್ರೀ ಕ್ಷೇತ್ರದ ಬಗ್ಗೆ ಅಪಪ್ರಚಾರಗಳು ನಡೆಯುತ್ತಿವೆ. ಹಿಂದೂ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಏನಾದರೂ ಪೋಸ್ಟ್ ಮಾಡಿದರೆ, 24 ಗಂಟೆಯಲ್ಲಿ ಅವರನ್ನು ಬಂಧಿಸುತ್ತಾರೆ ಎಂದು ಆಕ್ಷೇಪಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ವಿಷಯದಲ್ಲಿ 15-20 ದಿನಗಳಿಂದ ಸರಾಗವಾಗಿ ಅಪಪ್ರಚಾರ ನಡೆಯುತ್ತಿದೆ. ಆದರೂ, ಇವರ ವಿರುದ್ಧ ತನಿಖೆ ಮಾಡುತ್ತಿಲ್ಲ; ಇದರ ವಿರುದ್ಧ ಬಿಜೆಪಿ ಹೋರಾಟ ಕೈಗೆತ್ತಿಕೊಂಡಿದೆ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.

ಹರಿಕಥೆ ಹೇಳಿದ ಸಿಎಂ

ಚಿನ್ನಸ್ವಾಮಿ ಕ್ರೀಡಾಂಗಣದ ಆರ್.ಸಿ.ಬಿ ಗೆಲುವಿನ ಸಂಭ್ರಮಾಚರಣೆಯಲ್ಲಿ ನಡೆದ ಕಾಲ್ತುಳಿತ, 11 ಸಾವಿನ ಸಂಬಂಧ ದುರ್ಘಟನೆಯ ಕುರಿತ ಉತ್ತರ ಕೊಡುವಾಗ ಮುಖ್ಯಮಂತ್ರಿಗಳು ಸದನದಲ್ಲಿ ಬಹಳ ಭಾವುಕರಾಗಿ ಆ ವಿಚಾರ ಪ್ರಸ್ತಾಪಿಸುವ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ, ಅವರು ಹರಿಕಥೆ ಹೇಳುವ ಕೆಲಸ ಮಾಡಿದರು ಎಂದು ವಿಜಯೇಂದ್ರ ವ್ಯಂಗ್ಯವಾಡಿದರು.

ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆದ ಇಂಥ ಸಾವಿನ ಅಂಕಿ ಅಂಶವನ್ನು ಅವರು ನೀಡಿದರು. ಬಿಜೆಪಿ ಸಾವಿನಲ್ಲಿ ರಾಜಕೀಯ ಮಾಡುತ್ತಿಲ್ಲ. ಕೋವಿಡ್ ವೇಳೆ ಆಮ್ಲಜನಕ ಕೊರತೆಯಿಂದ ಚಾಮರಾಜನಗರ ಜಿಲ್ಲೆಯಲ್ಲಿ 36 ಜನರು ಮೃತಪಟ್ಟಿದ್ದರು. ಆಗ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರು ರಾಹುಲ್ ಗಾಂಧಿಯನ್ನು ಕರೆದುಕೊಂಡು ಬಂದು ಕಳೆದ ಚುನಾವಣೆ ಸಂದರ್ಭದಲ್ಲಿ ಭಾರತ್ ಜೋಡೋ ಯಾತ್ರೆ ಮಾಡಿದ್ದರು.

ಮೃತ 36 ಜನರ ಕುಟುಂಬದವರಿಗೆ ಸರ್ಕಾರಿ ನೌಕರಿ ಕೊಡುವುದಾಗಿ ತಿಳಿಸಿದ್ದರು. ಸರಕಾರ ಬಂದು ಎರಡೂವರೆ ವರ್ಷವಾದರೂ ನಿಮ್ಮ ಯೋಗ್ಯತೆಗೆ ಸರ್ಕಾರಿ ನೌಕರಿ ಕೊಡಲು ಸಾಧ್ಯವಾಯಿತೇ?. ಸಾವಿನಲ್ಲಿ ರಾಜಕೀಯ ಮಾಡುವವರು ಕಾಂಗ್ರೆಸ್ ಪಕ್ಷದವರು ಎಂದು ಆರೋಪಿಸಿದರು.

ಅಮಾಯಕ ಅಧಿಕಾರಿಗಳಿಗೆ ಶಿಕ್ಷೆ

ಕಾಲ್ತುಳಿತ ಸಾವಿನ ವಿಷಯದಲ್ಲಿ ತಮ್ಮ ತಪ್ಪನ್ನು ಮುಚ್ಚಿ ಹಾಕಿಕೊಳ್ಳುವ ಸಲುವಾಗಿ ಅಮಾಯಕ ಪೊಲೀಸ್ ಅಧಿಕಾರಿ ಮೇಲೆ ಕ್ರಮ ಕೈಗೊಂಡಿರಲ್ಲವೇ ಎಂದು ಕೇಳಿದರು. ಪೊಲೀಸ್ ಇಲಾಖೆಗೇ ಅಪಮಾನ ಮಾಡುವ ಕೆಲಸ ಮಾಡಿದಿರಲ್ಲವೇ? ಅದಕ್ಕೆ ಮುಖ್ಯಮಂತ್ರಿ ಉತ್ತರ ಕೊಡಬೇಕಿತ್ತು ಎಂದು ಆಗ್ರಹಿಸಿದರು.

ಆರ್.ಸಿ,ಬಿ, ಕೆಎಸಿಎ, ಡಿಎನ್‍ಎ, ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥರು ಎಂಬ ತೀರ್ಪನ್ನು ಮುಖ್ಯಮಂತ್ರಿಗಳೇ ಕೊಟ್ಟಿದ್ದಾರೆ. ಈ ಸಂಪೂರ್ಣ ಧಾರವಾಹಿಯಲ್ಲಿ ಮುಖ್ಯಮಂತ್ರಿಗಳೇ ಅಪರಾಧಿ ನಂಬರ್ 1. ಉಪ ಮುಖ್ಯಮಂತ್ರಿಗಳು ಎಡರನೇ ಅಪರಾಧಿ. ಇವರ ಹುಳುಕನ್ನು ಮುಚ್ಚಿ ಹಾಕಿಕೊಳ್ಳಲು ಭಾಷಣ ಬಿಗಿಯುತ್ತಾರೆ ಎಂದು ಟೀಕಿಸಿದರು.

ವಿಧಾನಸೌಧದ ಬಳಿ ವಿಜಯೋತ್ಸವ ಮಾಡಲು ತೀರ್ಮಾನ ಮಾಡಿದಿರಲ್ಲವೇ? ಆರ್‍ಸಿಬಿಯಲ್ಲಿ ಕರ್ನಾಟಕದ ಎಷ್ಟು ಆಟಗಾರರು ಇದ್ದಾರೆ ಎಂಬುದು ಆಗ ನಿಮಗೆ ಗೊತ್ತಿರಲಿಲ್ಲವೇ? ತಮ್ಮ ಕುಟುಂಬದ ಸದಸ್ಯರನ್ನು ಕರೆದುಕೊಂಡು ಸೆಲ್ಫಿ ಹೊಡೆಸಿಕೊಂಡಿರಲ್ಲವೇ? ಆಗ ಈ ತಂಡದಲ್ಲಿ ಎಷ್ಟು ಕನ್ನಡಿಗರಿದ್ದಾರೆ ಎಂದು ಗೊತ್ತಿರಲಿಲ್ಲವೇ? ಇವತ್ತು ಮುಖ್ಯಮಂತ್ರಿಗೆ ನೆನಪಾಗುತ್ತಿದೆಯೇ? ಕಾಲ್ತುಳಿತದ 11 ಸಾವು ಸರ್ಕಾರಿ ಪ್ರಾಯೋಜಿತ ಕೊಲೆ ಎಂದು ಬಿ.ವೈ.ವಿಜಯೇಂದ್ರ ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net