ಮಂಗಳವಾರ ದೆಹಲಿಗೆ ಸಿಎಂ, ಡಿಸಿಎಂ

CM Siddaramaiah
Published on

ಬೆಂಗಳೂರು: ಕೇಂದ್ರ ಸರ್ಕಾರದ ವಿವಿಧ ಆಯಾಮದಲ್ಲಿ ಹೋರಾಟಕ್ಕಿಳಿದಿರುವ ಇಂಡಿ ಒಕ್ಕೂಟ, ಮುಂದಿನ ದಿನಗಳಲ್ಲಿ ಇನಷ್ಟು ರೀತಿಯಲ್ಲಿ ಅಸಹಕಾರ ತೋರಲು ಕಾರ್ಯತಂತ್ರ ರೂಪಿಸುತ್ತಿದೆ. ಇದರ ಭಾಗವಾಗಿ ಮುಂದಿನ ಮಂಗಳವಾರ ದೆಹಲಿಯಲ್ಲಿ ಅಖಿಲ ಭಾರತ ಕಾಂಗ್ರೆಸ್, ತಾನು ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರಾಜ್ಯ ಕೈಗೊಂಡಿರುವ ಕೇಂದ್ರದ ವಿರುದ್ಧದ ನಿರ್ಣಯ, ತೀರ್ಮಾನಗಳನ್ನು ಈ ಸಭೆಯಲ್ಲಿ ಸಿಎಂ ಪ್ರಸ್ತಾಪಿಸಲಿದ್ದಾರೆ. ಜತೆಗೆ ಮುಂದೆ ಯಾವ ರೀತಿ ಕೇಂದ್ರವನ್ನು ಇಕ್ಕಟ್ಟಿಗೆ ಸಿಲುಕಿಸಬಹುದೆಂಬ ಬಗ್ಗೆ ಚರ್ಚೆ ನಡೆಸುವರು ಎಂದು ಮೂಲಗಳು ತಿಳಿಸಿವೆ.
ಮುಜಗರ
ಲೋಕಸಭೆ ಹಾಗೂ ರಾಜ್ಯ ಸಭೆಯಲ್ಲಿ ಕರ್ನಾಟಕ ಸರ್ಕಾರದ ವಿಚಾರ ಇಟ್ಟುಕೊಂಡು ಬಿಜೆಪಿ, ಜೆಡಿಎಸ್ ಸಂಸದರು ಮುಜುಗರ ಉಂಟು ಮಾಡುತ್ತಿದ್ದಾರೆ, ರಾಷ್ಟ್ರೀಯ ಚರ್ಚಾ ವಿಚಾರವಾಗಿ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ಕಾಂಗ್ರೆಸ್ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ.
ವಾಲ್ಮೀಕಿ ನಿಗಮದಲ್ಲಿ ನಡೆದ ಬಹುಕೋಟಿ ಅಕ್ರಮ ಹಾಗೂ ಮುಡಾ ಹಗರಣದ ಕಾವು ಲೋಕಸಭೆ ರಾಜ್ಯ ಸಭೆಯಲ್ಲೂ ಪ್ರತಿನಿಧಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದೆ. ಈ ಎರಡೂ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆ ತರಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಹಾಗೆಯೇ, ಸಿಎಂ, ಡಿಸಿಎಂ ದೆಹಲಿ ಭೇಟಿ ಸಂದರ್ಭದಲ್ಲಿ ಹೈಕಮಾಂಡ್ ಈ ಬಗ್ಗೆ ಸ್ಪಷ್ಟನೆ ಕೇಳಲಿದೆ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net