ನಾಳೆ ಲೋಕಾಯುಕ್ತ ಪೊಲೀಸರ ಎದುರು ಸುಳ್ಳು ಕೇಸಿನ ಬಗ್ಗೆ ಹೇಳಿಕೆ ಕೊಡಬೇಕಿದೆ: ಸಿದ್ದರಾಮಯ್ಯ | Muda Case

siddaramaiah
Published on

ಬೆಂಗಳೂರು: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಹಿರೇಬೆಂಡಿಗೇರಿ ಗ್ರಾಮದಲ್ಲಿ ನಡೆದ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿ ವಿರುದ್ಧ ಕಿಡಿಕಾರಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಡೂರು, ಶಿಗ್ಗಾಂವಿ, ಚನ್ನಪಟ್ಟಣ ಮೂರೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಶತಸಿದ್ಧ. ಇದು ನುಡಿದಂತೆ ನಡೆದ ಕಾಂಗ್ರೆಸ್​ಮತ್ತು ಮಾತಿಗೆ ತಪ್ಪಿದ ಬಿಜೆಪಿ ನಡುವಿನ ಚುನಾವಣೆ. ಈ ಚುನಾವಣೆಯಲ್ಲಿ ಜನರ ಮತಕ್ಕೆ ಗೌರವ ಕೊಟ್ಟ ನಾವು ಗೆಲ್ಲಬೇಕು, ನಿಮ್ಮ ನಂಬಿಕೆಗೆ ದ್ರೋಹ ಬಗೆದ ಬಿಜೆಪಿ ಸೋಲಬೇಕು ಎಂದು ಹೇಳಿದರು (Muda Case).

"ರಾಜ್ಯದಲ್ಲಿ ಇವತ್ತಿನವರೆಗೂ ಬಿಜೆಪಿ ಬಹುಮತ ಪಡೆದು ಅಧಿಕಾರ ನಡೆಸಿಲ್ಲ. ಒಂದು ಬಾರಿಯೂ ಬಿಜೆಪಿಗೆ ಬಹುಮತ ಸಿಕ್ಕಿಲ್ಲದ್ದರಿಂದ ಮೂರು ಬಾರಿಯೂ ಕಾಂಗ್ರೆಸ್ ಶಾಸಕರನ್ನು ಖರೀದಿಸಿ ಹಿಂಬಾಗಿಲಿನಿಂದ ಅಧಿಕಾರ ನಡೆಸಿದರು. ಆಪರೇಷನ್ ಕಮಲಕ್ಕೆ ಹಾಕಿದ ಹಣ ರಿಕವರಿ ಮಾಡಲು ಭ್ರಷ್ಟಾಚಾರ ಮಾಡಿದರು. ಚುನಾವಣೆ ವೇಳೆ ಕೊಟ್ಟ ಭರವಸೆಗಳಲ್ಲಿ ಶೇ.10 ರಷ್ಟೂ ಈಡೇರಿದ್ದಿಲ್ಲ. ನಾವು ಕೊಟ್ಟ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಈ ಬಗ್ಗೆ ನಾವು ಯಾವುದೇ ವೇದಿಕೆಯಲ್ಲಿ ದಾಖಲೆಗಳ ಸಮೇತ ಬಹಿರಂಗ ಚರ್ಚೆಗೆ ಸಿದ್ಧ" ಎಂದರು.

ನನ್ನ ಮಗ ಸ್ಪರ್ಧಿಸಲ್ಲ ಅಂತ ಹೇಳಿ...

"ಈಗ ನಮ್ಮ‌ ಸರ್ಕಾರ 136 ಸೀಟುಗಳನ್ನು ಗೆದ್ದು ಅಧಿಕಾರದಲ್ಲಿದೆ. ಆದ್ದರಿಂದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಈ ಕ್ಷೇತ್ರಗಳ ಅಭಿವೃದ್ಧಿಯ ವೇಗ ಹೆಚ್ಚುತ್ತದೆ. ಬಸವರಾಜ ಬೊಮ್ಮಾಯಿ ಎಂಥಾ ಮನುಷ್ಯ ಅಂದ್ರೆ, ಲೋಕಸಭಾ ಚುನಾವಣೆಗೆ ನಾನು ಮಾತ್ರ ನಿಲ್ಲಲ್ಲ. ನನಗೆ ಟಿಕೇಟ್ ಬೇಕಾಗಿಲ್ಲ‌ ಅಂತ ಹೇಳ್ತಾ ಹೇಳ್ತಾ ಅವರೇ ಟಿಕೆಟ್ ತಗೊಂಡು ಚುನಾವಣೆಗೆ ಸ್ಪರ್ಧಿಸಿದರು. ಈಗ ಉಪ ಚುನಾವಣೆಯಲ್ಲಿ ನನ್ನ ಮಗ ಸ್ಪರ್ಧಿಸಲ್ಲ, ನನ್ನ ಮಗನಿಗೆ ಟಿಕೇಟ್ ಕೇಳಲ್ಲಾ, ಕೇಳಲ್ಲಾ ಅನ್ನುತ್ತಲೇ ಭರತ್‌ಗೇ ಟಿಕೆಟ್ ತಂದರು. ಇದು ಬೊಮ್ಮಾಯಿ ಅವರ ಸ್ವಭಾವ" ಎಂದು ಕಿಡಿಕಾರಿದರು.

ಕುಟುಂಬ ರಾಜಕಾರಣ

"ಪ್ರಧಾನಿ ನರೇಂದ್ರ ಮೋದಿ ಅವರು ಕುಟುಂಬ ರಾಜಕಾರಣ ಬಗ್ಗೆ ಉದ್ದುದ್ದ ಭಾಷಣ ಬಾರಿಸ್ತಾರೆ. ಆದರೆ, ಇಲ್ಲಿ ಎಸ್. ಆರ್ ಬೊಮ್ಮಾಯಿ ಅವರ ಮೊಮ್ಮಗ, ಬಸವರಾಜ ಬೊಮ್ಮಾಯಿ ತಮ್ಮ ಮಗನಿಗೆ ಟಿಕೆಟ್ ಕೊಡಿಸಿದ್ದಾರೆ. ಹಾಗೆಯೇ ಕುಟುಂಬ ರಾಜಕಾರಣವನ್ನು ಬಿಟ್ಟು ಬೇರೇನೂ ಮಾಡದ ದೇವೇಗೌಡರು, ಎಚ್.​ಡಿ. ಕುಮಾರಸ್ವಾಮಿ ಮತ್ತು ಎಚ್.ಡಿ.ರೇವಣ್ಣ ಅವರನ್ನು ಅಪ್ಪಿಕೊಂಡಿದ್ದಾರೆ" ಎಂದು ವ್ಯಂಗ್ಯವಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net