ಕತೆ ಕಟ್ಕೊಂಡು, ತಲೆಬುಡ ಇಲ್ಲದ ಅರ್ಥಹೀನ ಪ್ರಶ್ನೆಗಳನ್ನು ಕೇಳಿ ನಿಮ್ಮ… ಆರ್​. ಅಶೋಕ್​ಗೆ ಸಿಎಂ ಟಾಂಗ್​

ವಿಜಯವಾಣಿ - 2024-08-05T170330.327
Published on

ಬೆಂಗಳೂರು: ವಿಪಕ್ಷ ನಾಯಕರಾದ ಆರ್​. ಅಶೋಕ್​ ಅವರೇ ವಾಲ್ಮೀಕಿ ಅಭಿವೃದ್ದಿ ನಿಗಮಕ್ಕೆ ಸಂಬಂಧಿಸಿದ ಹಗರಣದ ಬಗ್ಗೆ ನೀವು ಕೆಲವು ಪ್ರಶ್ನೆಗಳನ್ನು ಕೇಳಿದ್ದೀರಿ, ನಿಮಗೆ ಗೊತ್ತಿರುವಂತೆ ಈ ಪ್ರಕರಣದ ತನಿಖೆಗೆ ನಮ್ಮ ಸರ್ಕಾರ ಎಸ್​ಐಟಿ ರಚಿಸಿದೆ. ಇದಕ್ಕೆ ಸಂಬಂಧಿಸಿದಂತೆ ನಿಮಗೆ ಮಾಹಿತಿ ಇಲ್ಲವೇ? ನಿಮ್ಮ ಪಕ್ಷಕ್ಕೆ ಏನಾದರೂ ಹೇಳುವುದಿದ್ದರೆ, ಇಲ್ಲ ಕೇಳುವುದಿದ್ದರೆ ಹೋಗಿ ಎಸ್​ಐಟಿ ತನಿಖಾ ಸಂಸ್ಥೆ ಮುಂದೆ ಕೇಳಿ ಎಂದು ಬಿಜೆಪಿ ನಾಯಕರ ವಿರುದ್ಧ ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.

"ಇದನ್ನು ಬಿಟ್ಟು ಹಾದಿಬೀದಿಯಲ್ಲಿ ಮಾತನಾಡುವವರಂತೆ, ತಾವೇ ಕತೆ ಕಟ್ಟಿಕೊಂಡು ತಲೆಬುಡ ಇಲ್ಲದ ಅರ್ಥಹೀನ ಪ್ರಶ್ನೆಗಳನ್ನು ನನಗೆ ಕೇಳಿ ನಿಮ್ಮ ಸ್ಥಾನದ ಗೌರವವನ್ನು ನೀವೇ ಕಳೆದುಕೊಳ್ಳಬೇಡಿ. ನಮಗೆ ಪ್ರಶ್ನೆ ಕೇಳುವ ಮೊದಲು ನಿಮ್ಮದೇ ಪಕ್ಷದ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾ‍ಳ್ ಅವರು ನಿರಂತರವಾಗಿ ಪಕ್ಷದ ಅಧ್ಯಕ್ಷರಾದ ಬಿ.ವೈ. ವಿಜಯೇಂದ್ರ ವಿರುದ್ಧ ಮಾಡುತ್ತಿರುವ ಗಂಭೀರ ಸ್ವರೂಪದ ಆರೋಪಗಳಿಗೆ ಉತ್ತರಿಸುವ ಧೈರ್ಯ ತೋರಿಸಿ" ಎಂದು ಲೇವಡಿ ಮಾಡಿದ್ದಾರೆ.

"ಭ್ರಷ್ಟಾಚಾರ, ವಿದ್ರೋಹ ಮತ್ತು ಸ್ವಜನಪಕ್ಷಪಾತವೂ ಸೇರಿದಂತೆ ಯತ್ನಾಳ್ ಮಾಡುತ್ತಿರುವ ಆರೋಪಗಳು ಗಂಭೀರ ಸ್ವರೂಪದ್ದಾಗಿವೆ. ಇಂತಹ ಆರೋಪಗಳನ್ನು ಮಾಡಿದ ನಂತರವೂ ಅವರ ವಿರುದ್ಧ ಬಿಜೆಪಿ ಹೈಕಮಾಂಡ್ ಯಾವುದೇ ಕ್ರಮಕೈಗೊಳ್ಳದಿರುವುದನ್ನು ನೋಡಿದರೆ ಅವರ ಆರೋಪಗಳಲ್ಲಿ ಸತ್ಯಾಂಶ ಇರುವುದನ್ನು ಪಕ್ಷದ ಹೈಕಮಾಂಡ್ ಕೂಡಾ ಒಪ್ಪಿಕೊಂಡಂತೆ ಕಾಣುತ್ತಿದೆ" ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net