

ಬೆಂಗಳೂರು: ಮುಡಾ ನಿವೇಶನ ಹಗರಣ ವಿಚಾರವಾಗಿ
ನ್ಯಾಯಾಲಯದಲ್ಲಿ ವಿಚಾರಣೆ ನಡೆದು ತೀರ್ಪು ಬಾಕಿ ಇರುವಾಗಲೇ ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಟೆನ್ಶನ್ ಶುರುವಾಗಿದೆ.
ಮೈಸೂರು ಮೂಲದ ಪಿಎಸ್ ನಟರಾಜ ಎಂಬುವರು ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಈ ದೂರಿನ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿಗೆ ವರದಿ ನೀಡುವಂತೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ. ಆ ಪ್ರಕಾರ ಮುಖ್ಯ ಕಾರ್ಯದರ್ಶಿಯವರು ಸಂಬಂಧಪಟ್ಟ ಇಲಾಖೆಯಿಂದ ಮಾಹಿತಿ ಕೇಳಿದ್ದಾರೆ.
ಆಗಸ್ಟ್ 27 ರಂದು ನಟರಾಜ್ ಎಂಬುವರು ರಾಜ್ಯಪಾಲರಿಗೆ ದೂರು ನೀಡಿದ್ದರು. ದೂರಿನಲ್ಲಿ ಮುಖ್ಯಮಂತ್ರಿಯವರ ಮೌಖಿಕ ನಿರ್ದೇಶನದ ಅನ್ವಯ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.
ಮುಖ್ಯಮಂತ್ರಿಯವರ ಮತಕ್ಷೇತ್ರ ವರುಣಾದಲ್ಲಿ ಮತ್ತು ಶ್ರೀರಂಗಪಟ್ಟ ಕ್ಷೇತ್ರದ ವ್ಯಾಪ್ತಿಯಲ್ಲಿ ಕರ್ನಾಟಕ ನಗರಾಭಿವೃದ್ಧಿ ವಿಧೇಯಕ, 1987ರ ಸೆಕ್ಷನ್ 15 ಮತ್ತು 25ರ ವಿರುದ್ಧವಾಗಿ ಕಾಮಗಾರಿ ಕೈಗೊಳ್ಳಲಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು 387 ಕೋಟಿಗಳ ಕಾಮಗಾರಿಗಳನ್ನು ನಿಯಮಬಾಹಿರವಾಗಿ ಕೈಗೊಂಡಿದೆ. ಪ್ರಾಧಿಕಾರದಲ್ಲಿ ಹಣವಿಲ್ಲದಿದ್ದರೂ ಮುಖ್ಯಮಂತ್ರಿಯವರ ಸೂಚನೆಯ ಮೇರೆಗೆ ಕಾಮಗಾರಿ ಕೈಗೊಳ್ಳಲಾಗಿದೆ. ಇದರಿಂದಾಗಿ ಅಧಿಕಾರ ದುರುಪಯೋಗವಾಗಿದ್ದು, ಈ ಬಗ್ಗೆ ಸಿಬಿಐ ತನಿಖೆ ಅಗತ್ಯವಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಸೆಪ್ಟೆಂಬರ್ 5 ರಂದು ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿರುವ ರಾಜ್ಯಪಾಲರು, ಮೈಸೂರಿನ ಪಿ.ಎಸ್. ನಟರಾಜ್ ಸಲ್ಲಿಸಿರುವ ದೂರಿನಲ್ಲಿರುವ ಅಂಶಗಳು ಬಹಳ ಗುರುತರವಾಗಿದೆ, ಈ ಬಗ್ಗೆ ಪರಿಶೀಲಿಸಿ ದಾಖಲೆಗಳ ಸಮೇತ ಶೀಘ್ರವಾಗಿ ವಿವರವಾದ ವರದಿ ಸಲ್ಲಿಸಿ ಎಂದು ತಿಳಿಸಿದ್ದಾರೆ.