

ಬೆಂಗಳೂರು: ರಾಜ್ಯ ಸಚಿವ ಸಂಪುಟದ ವಿಸ್ತರಣೆ ಅಥವಾ ಪುನಾರಚನೆ ಸಂಬಂಧ ಹೈಸಸ್ಪೆನ್ಸ್ ಮುಂದುವರಿದಿರುವ ನಡುವೆಯೇ ಮುಖ್ಯಮಂತ್ರಿ ಯಡಿಯೂರಪ್ಪ ಮಂಗಳವಾರ 33 ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಪ್ರಕ್ರಿಯೆಯನ್ನು ದಿಢೀರ್ ಮುಗಿಸಿ ಅಚ್ಚರಿ ಮೂಡಿಸಿದ್ದಾರೆ. ತಮ್ಮ ಬೆಂಬಲಿಗರು, ಹಿರಿಯ ಕಾರ್ಯಕರ್ತರಿಗೆ ಆದ್ಯತೆ ನೀಡಿರುವ ಬಿಎಸ್ವೈ ಅವರ ಈ ನಡೆ ಸಂಪುಟ ಕ್ಲೈಮ್ಯಾಕ್ಸ್ಗೆ ವೇದಿಕೆ ಸಜ್ಜುಗೊಳಿಸುವ ಜತೆಯಲ್ಲೇ ವರಿಷ್ಠರಿಗೂ ಸಂದೇಶ ರವಾನಿಸುವ ರಣತಂತ್ರವೆಂದೇ ವಿಶ್ಲೇಷಿಸಲಾಗುತ್ತಿದೆ.
ನಿಗಮ -ಮಂಡಳಿಗಳಿಗೆ ಆಯ್ಕೆಯಾದ ಬಹುತೇಕರು ಬಿಎಸ್ವೈ ಅವರ ಬೆಂಬಲಿಗರಾಗಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಸೋಮವಾರ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ರ್ಚಚಿಸಿದ ಬೆನ್ನಲ್ಲೇ ಈ ನೇಮಕ ಆದೇಶ ಪ್ರಕಟವಾಗಿದೆ. ನಿಗಮ, ಮಂಡಳಿಗಳ ನೇಮಕಕ್ಕೆ ಸಂಬಂಧಿಸಿದಂತೆ ಪಕ್ಷ ದಿಂದ ಸಲ್ಲಿಕೆಯಾಗಿದ್ದ ಪಟ್ಟಿಯಲ್ಲಿದ್ದ ಹೆಸರುಗಳಿಗೆ ಅವಕಾಶ ಸಿಕ್ಕಿಲ್ಲ ಎನ್ನಲಾಗಿದೆ.
ವರ್ಚಸ್ಸಿನ ಲೆಕ್ಕಾಚಾರ: ಸಂಘಟನೆ ಬಲವರ್ಧನೆಗೆ ನೆರವಾಗಬಲ್ಲವರಿಗೆ ಅವಕಾಶ ಕಲ್ಪಿಸಿ, 2ನೇ ಹಂತದ ನಾಯಕತ್ವ ಬೆಳೆಸುವುದಕ್ಕೂ ಸಿಎಂ ಆದ್ಯತೆ ನೀಡಿದ್ದಾರೆ. ಸರ್ಕಾರದ ಹಾಗೂ ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳುವ ಜತೆಯಲ್ಲೇ ಪಕ್ಷಕ್ಕೂ ಆದ್ಯತೆ ನೀಡಿ ಸಮತೋಲನ ಕಾಯ್ದುಕೊಳ್ಳುವ ಕಸರತ್ತು ನಡೆಸಿದಂತಿದೆ ಎಂದು ಪಕ್ಷದಲ್ಲಿ ಚರ್ಚೆ ಶುರುವಾಗಿದೆ.
ಸ್ಥಾನ ಪಡೆದ ಪ್ರಮುಖರು: ಕಲಬುರಗಿಯ ಯುವ ಮುಖಂಡ ಚಂದು ಪಾಟೀಲ್ಗೆ ನವೀಕರಿಸುವ ಇಂಧನ ಮೂಲಗಳ ಅಭಿವೃದ್ಧಿನಿಗಮ ನೀಡಲಾಗಿದೆ. ಶಿರಾ ಉಪ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿದ್ದ ಎಸ್.ಆರ್. ಗೌಡ ಹಾಗೂ ಬಿ.ಕೆ. ಮಂಜುನಾಥ್ಗೆ ನಿಗಮ ಅವಕಾಶ ನೀಡಲಾಗಿದೆ. ಶಾಸಕರಾದ ಎಸ್.ಆರ್. ವಿಶ್ವನಾಥ್, ದುರ್ಯೋದನ ಐಹೊಳೆ, ಬಿ.ಸಿ. ನಾಗೇಶ್ ಕೂಡ ಅವಕಾಶ ಗಿಟ್ಟಿಸಿದ್ದಾರೆ. ಶಿರಾ ಉಪ ಚುನಾವಣೆಯಲ್ಲಿ ಕೆಲಸ ಮಾಡಿದ್ದ ತಮ್ಮೇಶ್ಗೌಡ ಅವರಿಗೂ ಅದೃಷ್ಟ ಒಲಿದಿದೆ.
ಬಾಕಿಯಿರುವ 33 ನಿಗಮ-ಮಂಡಳಿಗಳ ಪೈಕಿ 18 ನಿಗಮ-ಮಂಡಳಿಗಳಿಗೆ ಪಕ್ಷದ ಮುಖಂಡರು ಮತ್ತು ಹಿರಿಯ ಕಾರ್ಯಕರ್ತರನ್ನು ನೇಮಿಸಲು ಕೋರಿ ಬಿಎಸ್ವೈಗೆ ದೀಪಾವಳಿ ಮೊದಲೇ ಪಕ್ಷದಿಂದ ಮುನ್ನವೇ ಸಲ್ಲಿಕೆಯಾಗಿತ್ತು. ಪಟ್ಟಿಯಲ್ಲಿ ಇರುವವರನ್ನು ನೇಮಿಸಿದ ಬಳಿಕ ಖಾಲಿ ಉಳಿಯುವ ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕವನ್ನು ಪಕ್ಷ ಸಿಎಂ ವಿವೇಚನೆಗೆ ಬಿಟ್ಟಿದ್ದು, ಇದರಲ್ಲಿ ನಾಲ್ಕೈದು ಶಾಸಕರಿಗೆ ಅವಕಾಶ ಕಲ್ಪಿಸಲು ಬಿಎಸ್ವೈ ಯೋಚಿಸಿದ್ದರು. ಅದರಂತೆಯೇ ನೇಮಕಗಳಾಗುತ್ತಿವೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು: ನಿಗಮ ಮಂಡಳಿ ನೇಮಕಾತಿ ಬಳಿಕ ಸಿಎಂ ಯಡಿಯೂರಪ್ಪ, ಸಂಪುಟ ವಿಸ್ತರಣೆಯತ್ತ ಚಿತ್ತ ಹರಿಸಲಿದ್ದಾರೆ. ಸಂಪುಟಕ್ಕೆ ಯಾರನ್ನು ತರಬೇಕು, ಹಾಲಿ ಸಚಿವರಲ್ಲಿ ಯಾರನ್ನು ಕೈ ಬಿಡಬೇಕೆನ್ನುವ ಪಟ್ಟಿಯನ್ನು ಹೈಕಮಾಂಡ್ಗೆ ನೀಡಿ ಬಂದ ಮೇಲೆ ಕೆಲ ಸಚಿವರು ಆತಂಕದಲ್ಲಿ ದೆಹಲಿ ನಾಯಕರನ್ನು ಎಡತಾಕಿ ಬಂದಿದ್ದಾರೆ. ಈ ಪಟ್ಟಿಯಲ್ಲಿ ಯಾರ್ಯಾರಿದ್ದಾರೆ ಎಂಬ ಮಾಹಿತಿ ಸೋರಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೆಲ ಸಚಿವರು ದೆಹಲಿ ಯಾತ್ರೆ ಮಾಡುತ್ತಿದ್ದಾರೆನ್ನುವ ಪಿಸು ಮಾತುಗಳು ಕೇಳಿ ಬರುತ್ತಿವೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್, ಸಿಎಂ ಭೇಟಿ ಮಾಡಿದ ಬಳಿಕ ರಾಜಕೀಯ ಚಟುವಟಿಕೆಗಳು ಇನ್ನಷ್ಟು ವೇಗ ಪಡೆದುಕೊಂಡಿವೆ.